ಮುಂಬೈ: ಬೆಳಗಾವಿ ಗಡಿ ವಿವಾದದ ನಡುವೆ ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ 865 ಹಳ್ಳಿಗಳಿಗೆ ಆರೋಗ್ಯ ಯೋಜನೆಯನ್ನು ವಿಸ್ತರಿಸುವಂತೆ ಸೋಮವಾರ ಆದೇಶ ಹೊರಡಿಸಿದೆ.
ಈಗಾಗಲೇ ಅಂತ್ಯೋಧ್ಯಯ ಆಹಾರ ಯೋಜನೆ, ಅನ್ನಪೂರ್ಣ ಪಡಿತರ ಚೀಟಿ ಹೊಂದಿರುವವರು ಮಹಾತ್ಮ ಜ್ಯೋತಿ ಜ್ಯೋತಿರಾವ್ ಪುಲೆ ಜನ್ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಬೆಳಗಾವಿ, ಕಾರವಾರ, ಕಲಬುರಗಿ, ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿರುವ 12 ತಾಲ್ಲೂಕುಗಳ 865 ಹಳ್ಳಿಗಳ ಜನರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆಂದು ಹೇಳಲಾಗಿದೆ. ಈ ಯೋಜನೆಯಡಿ ಒಂದು ಕುಟುಂಬವು ಸರ್ಕಾರ ಗುರುತಿಸಿರುವ 34 ಆಸ್ಪತ್ರೆಗಳಲ್ಲಿ 1.5 ಲಕ್ಷ ರೂಪಾಯಿ ವರೆಗಿನ 996 ತರಹದ ಚಿಕಿತ್ಸೆ ಪಡೆಯಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಜನರು ಮಹಾತ್ಮ ಜ್ಯೋತಿರಾವ್ ಪುಲೆ ಆರೋಗ್ಯ ಯೋಜನೆಯಡಿ ಸರ್ಕಾರಿ ಹಾಗೂ ಸರ್ಕಾರ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು ಎಂದು ಮಹಾರಾಷ್ಟ್ರ ಸರ್ಕಾರ ಸೋಮವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.