ಬೆಂಗಳೂರು: ಬೆಳಗಾವಿ, ಅದರ ಸುತ್ತಮುತ್ತಲಿನ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ಸರಿಯಲ್ಲ ಎಂದು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಹೇಳಿದ್ದಾರೆ.
ಬೆಳಗಾವಿಯು ಮೂಲ ಕರ್ನಾಟಕದ ಭೌಗೋಳಿಕ ಕೇಂದ್ರಬಿಂದು ಎಂಬುದು ಉದ್ಧವ್ಗೆ ತಿಳಿದಿಲ್ಲ. ಈಗಿನ ಮಹಾರಾಷ್ಟ್ರ ಸಾವಿರ ವರ್ಷಗಳ ಹಿಂದೆ ಕನ್ನಡ ಮಾತನಾಡುವ ಪ್ರದೇಶವಾಗಿತ್ತು. ಬಾಲಗಂಗಾಧರ ತಿಲಕರು ಬೆಳಗಾವಿಯ ಗುರ್ಲಾ ಹೊಸೂರಿನಲ್ಲಿ ಮಾತನಾಡುತ್ತ ‘ಮರಾಠಿಗರದ್ದು, ಕನ್ನಡಿಗರ ರಕ್ತ’ ಎಂದು ಹೇಳಿರುವ ಬಗ್ಗೆ ಉಲ್ಲೇಖವಿದೆ. ಬ್ರಿಟೀಷರ ಕಾಲದ ಶಾಲಾ ಪಠ್ಯಪುಸ್ತಕದಲ್ಲಿ ಬೆಳಗಾವಿ ಕರ್ನಾಟಕದ ಭಾಗವಾಗಿರುವ ನಕಾಶೆಯೂ ಇದೆ. ಜತೆಗೆ 1921ರಲ್ಲಿ ಮರಾಠಿಗರಾದ ಕೇಳ್ಕರ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಾದೇಶಿಕ ಘಟಕವನ್ನಾಗಿ ಬೆಳಗಾವಿಯು ಸೇರಿದಂತೆ ಕರ್ನಾಟಕವನ್ನು ಗುರುತಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತವನ್ನು ಭಾಷಾವಾರು ಪ್ರಾಂತಗಳನ್ನಾಗಿ ವಿಂಗಡಿಸಲು ನೇಮಕವಾದ ಫಜಲ್ ಅಲಿ ನಿಯೋಗ ಸಹ 1956ರಲ್ಲಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿತು. ಆದರೆ, ಇದನ್ನು ಮಹಾರಾಷ್ಟ್ರ ಸರ್ಕಾರ ಒಪ್ಪದ ಕಾರಣ 1967ರಲ್ಲಿ ಮಹಾಜನ್ ಆಯೋಗವು ಅಸ್ತಿತ್ವಕ್ಕೆ ಬಂದಿತು. ಈ ಆಯೋಗದಲ್ಲೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ ಕಾರಣ ಮತ್ತೆ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದೆ. ಆದರೆ ತೀರ್ಪು ಬರುವ ಮೊದಲೇ ಅವರು ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ಸಲ್ಲದು ಎಂದು ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದರು.