ನ್ಯೂಸ್

Maharashtra ವಿಧಾನಸಭೆ ಚುನಾವಣೆ; ಪೂರ್ವ ತಯಾರಿ ಪರಿಶೀಲಿಸಿದ ಚುನಾವಣಾ ಆಯೋಗ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದು, ಶನಿವಾರ (ಸೆ.28) ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಹತ್ವ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು.

ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಅವರ ಸಮ್ಮುಖದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಚುನಾವಣೆ ಸಿದ್ಧತೆಗಳ ಕುರಿತು ಮಹಾರಾಷ್ಟ್ರದ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

“ಮಹಾರಾಷ್ಟ್ರದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಇಲ್ಲಿಗೆ ಬಂದಿದ್ದೇವೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದೇವೆ. ಮಧ್ಯಸ್ಥಗಾರರು, ಡಿಎಂ, ಪೊಲೀಸ್ ಆಯುಕ್ತರು, ಡಿಜಿಪಿ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

ದೀಪಾವಳಿಯಂತಹ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಘೋಷಿಸುವಂತೆ ರಾಜಕೀಯ ಪಕ್ಷಗಳು ಚುನಾವಣಾ ಸಮಿತಿಗೆ ತಿಳಿಸಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಹೇಳಿದ್ದಾರೆ. ಮುಂದಿನ ತಿಂಗಳು ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.

ಪ್ರಸ್ತುತ ವಿಧಾನಸಭೆಯ ಅವಧಿಯು ನವೆಂಬರ್ 26 ರಂದು ಮುಕ್ತಾಯಗೊಳ್ಳಲಿದೆ. ಇದರಿಂದ ದಿನಾಂಕದ ಮೊದಲು ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು. ರಾಜ್ಯಗಳಲ್ಲಿ ಒಟ್ಟು 9.59 ಕೋಟಿ ಮತದಾರರು ಇದ್ದು, ಪುರುಷರು 4.59 ಕೋಟಿ ಮತ್ತು 4.64 ಕೋಟಿ ಮಹಿಳೆಯರು ಇದ್ದಾರೆ. 18-19 ವರ್ಷ ವಯಸ್ಸಿನ ಮೊದಲ ಬಾರಿ ಮತ ಹಾಕುವ ಮತದಾರರು ಸುಮಾರು 19.48 ಲಕ್ಷ,” ಇದ್ದಾರೆ.