ನ್ಯೂಸ್

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಅಧ್ಯಕ್ಷ ಅಸ್ವಸ್ಥ; ವೈದ್ಯರು ಹೇಳಿದ್ದಿಷ್ಟು...

ಲಕ್ನೋ: ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯಿಂದ ನೀಡಿದ ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಮಹಾಂತ ನೃತ್ಯಗೋಪಾಲ ದಾಸ್ ಯುರಿನರಿ ಇನ್​ಫೆಕ್ಷನ್​ ಮತ್ತು ಸಾಮಾನ್ಯ ಬಳಲಿಕೆಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಅವರನ್ನು ನಿನ್ನೆ ರಾತ್ರಿಯೇ ಅಯೋಧ್ಯೆಯಿಂದ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ನೋದಲ್ಲಿರುವ ಮೇದಾಂತ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರ ತಂಡ ವಿಶೇಷ ಗಮನ ಹರಿಸಿ ಚಿಕಿತ್ಸೆ ನೀಡುತ್ತಿದೆ.

ನೃತ್ಯಗೋಪಾಲ ದಾಸ ಅವರ ಆರೋಗ್ಯ ಪರಿಸ್ಥಿತಿ ಕುರಿತು ಮೇದಾಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರಾಕೇಶ್​ ಕಪೂರ್​ ಅಧಿಕೃತ ಮಾಹಿತಿ ನೀಡಿದ್ದು, ನೃತ್ಯಗೋಪಾಲ ದಾಸರ ಆರೋಗ್ಯ ಪರಿಸ್ಥಿತಿ ಸಮಾಧಾನಕರವಾಗಿದ್ದು, ಸ್ಥಿರವಾಗಿದೆ. ಅವರಿಗೆ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್​ಗಳು ಮತ್ತು ಯುರಾಲಜಿ ಟೀಮ್​ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.