ನ್ಯೂಸ್

ಮಹದಾಯಿ ತೀರ್ಪ, ತಕ್ಷಣ ಅಧಿಸೂಚನೆಗೆ ಒತ್ತಡ: ವಾರದಲ್ಲಿ ಕೇಂದ್ರಕ್ಕೆ ರಾಜ್ಯದ ನಿಯೋಗ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮಹದಾಯಿ ನೀರು ಬಳಸಿಕೊಳ್ಳಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಗೋವಾ ಕಿರಿಕಿರಿ ಶುರುಮಾಡಿದೆ. ಹೀಗಾಗಿ ಕೂಡಲೇ ನೀರು ಬಳಕೆಗಾಗಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಪ್ರಯತ್ನ ಆರಂಭಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ ಸೋಮವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಸುಪ್ರೀಂನಲ್ಲಿ ಅಂತಿಮ ವಿಚಾರಣೆ ಜು.15ರಂದು ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಅಧಿಸೂಚನೆ ಹೊರಡಿಸುವಂತೆ ಪ್ರಧಾನಿ- ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಲಾಗಿದೆ. ರಮೇಶ್ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗ ಕಳುಹಿಸಿ ಒತ್ತಡ ಹೇರಲು ತೀರ್ವನಿಸಲಾಗಿದ್ದು, ಸಿಎಂ ಜತೆ ರ್ಚಚಿಸಿ ಈ ವಾರದೊಳಗೆ ತೆರಳುವ ಸಾಧ್ಯತೆಗಳಿವೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ನ್ಯಾಯಾಧೀಕರಣ ತೀರ್ಪಿನ ಸಂಬಂಧ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಆದಷ್ಟು ಬೇಗ ಅಧಿಸೂಚನೆ ಹೊರಬಿದ್ದರೆ, ಮುಂದಿನ ಹಾದಿ ಸುಗಮವಾಗಲಿದೆ. ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಅಧಿಕಾರಿ ವರ್ಗ ಹಾಗೂ ರಾಜಕೀಯ ವಲಯದಿಂದ ಒತ್ತಡ ಹೇರುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಿತು.

ಅಧಿಕಾರಿಗಳಿಗೆ ಸೂಚನೆ: ಮಹದಾಯಿ ನದಿ ನೀರು ಹಂಚಿಕೆ ಕುರಿತ ಅಧಿಸೂಚನೆ ಹೊರಡಿಸಲು ಪೂರಕ ದಾಖಲೆ ಸಿದ್ಧಪಡಿಸಿಕೊಳ್ಳುವಂತೆ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಗೋವಾ ಮುಂದಿನ ಹಾದಿ: ಮಹದಾಯಿ ಹೋರಾಟದಲ್ಲಿ ಗೋವಾ ಸೋತಿಲ್ಲ, ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಆ ರಾಜ್ಯದ ಸಿಎಂ ಪ್ರಮೋದ್ ಸಾವಂತ್ ಪುನರುಚ್ಛರಿಸುವ ಮೂಲಕ ಕಾನೂನು ಹೋರಾಟ ಖಾತ್ರಿಪಡಿಸಿದ್ದಾರೆ. ನ್ಯಾಯಾಧೀಕರಣದ ತೀರ್ಪನ್ನು ಅಧಿಸೂಚನೆಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆದರೂ ಕರ್ನಾಟಕ ಕಳಸಾ ಬಂಡೂರಿ ಯೋಜನೆಯ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಯಾಜ್ಞೆ ತರಲು ಗೋವಾ ಅರ್ಜಿ ಸಲ್ಲಿಸುವುದು ಸ್ಪಷ್ಟವಾಗಿದೆ. ವಿಶೇಷವೆಂದರೆ, ಮುಂದಿನ 3 ದಿನಗಳಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅಲ್ಲಿನ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇಂದು ನವದೆಹಲಿಗೆ ಅಧಿಕಾರಿಗಳ ತಂಡ

ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದ ನಿಯೋಗ ಮಂಗಳವಾರ ನವದೆಹಲಿಗೆ ತೆರಳಿ ಕೇಂದ್ರ ಜಲ ಆಯೋಗ ಹಾಗೂ ಜಲಸಂಪನ್ಮೂಲ ಮಂತ್ರಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಅಧಿಸೂಚನೆ ಹೊರಡಿಸುವ ಸಂಬಂಧ ರ್ಚಚಿಸಲಿದೆ. ಮಂಗಳವಾರ ಸಂಜೆ 6 ಗಂಟೆಗೆ ನವದೆಹಲಿಯಲ್ಲಿ ಕೇಂದ್ರ ಜಲ ಆಯೋಗ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ತಾಂತ್ರಿಕ ಸಮಿತಿ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.