ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ, ಬಾಲಿವುಡ್ ನಟ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬೈ ಮೂಲದ 38 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
'ನಾನು ಮಹಾಕ್ಷಯ್ ಜತೆ 2015ರಿಂದ 2018ರವರೆಗೆ ಸಂಬಂಧ ಹೊಂದಿದ್ದೆ. ಆಗ ಅವರು ನನ್ನನ್ನೇ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದರು. ಆದರೆ ನಂತರ ಮೋಸ ಮಾಡಿದ್ದಾರೆ' ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ನಾವಿಬ್ಬರೂ ರಿಲೇಶನ್ಶಿಪ್ನಲ್ಲಿದ್ದಾಗ ಪಶ್ಚಿಮ ಅಂಧೇರಿಯ ಆದರ್ಶನಗರದಲ್ಲಿ ಇರುವ ಅವರ ಫ್ಲ್ಯಾಟ್ಗೆ ಪದೇಪದೆ ಹೋಗುತ್ತಿದ್ದೆ. ಆ ಫ್ಲ್ಯಾಟ್ನ್ನು 2015ರಲ್ಲಿ ಅವರು ಖರೀದಿಸಿದ್ದರು. ನಾನು ಅಲ್ಲಿಗೆ ಹೋದಾಗ ನನಗೆ ಮತ್ತು ಬರುವ ತಂಪು ಪಾನೀಯ ಕುಡಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನಾನು ಗರ್ಭಿಣಿಯಾಗಿದ್ದೆ, ಆದರೆ ಮಹಾಕ್ಷಯ್ ಮಾತ್ರೆಗಳನ್ನು ಕೊಟ್ಟು ಅದನ್ನು ಅಬಾರ್ಶನ್ ಮಾಡಿಸಿದರು' ಎಂದು ಆರೋಪಿಸಿದ್ದಾರೆ.
'ಮಹಾಕ್ಷಯ್ ಎದುರು ಪದೇಪದೆ ಮದುವೆ ಪ್ರಸ್ತಾಪವನ್ನು ಇಡುತ್ತಲೇ ಇದ್ದೆ. ಆದರೆ 2018ರಲ್ಲಿ ಆತ ಖಡಾಖಂಡಿತವಾಗಿ ನಿರಾಕರಿಸಿದ. ಆಗ ನಮ್ಮಿಬ್ಬರ ಮಧ್ಯೆ ಜಗಳ ಆಯಿತು. ನಾನು ಮಹಾಕ್ಷಯ್ನನ್ನು ಕರೆಯಲು ಹೋದಾಗ ಅವನ ತಾಯಿ ಯೋಗಿತಾ ಬಾಲಿ ನನಗೆ ಬೆದರಿಕೆ ಹಾಕಿದ್ದಾರೆ' ಎಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)