ಭಾರತೀಯರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಈ ದಿನ ರಾತ್ರಿಯಿಡೀ ಎಚ್ಚರವಾಗಿದ್ದು ಶಿವಪೂಜೆ, ಶಿವಧ್ಯಾನ, ಶಿವಸ್ಮರಣೆ ಮಾಡುತ್ತ ಜಾಗರಣೆಯನ್ನು ನಡೆಸಬೇಕು. ಈ ಸಂಚಿಕೆಯಲ್ಲಿ ಶಿವರಾತ್ರಿಯ ಹಿನ್ನೆಲೆ, ಆಚರಣೆ; ಬಸವಣ್ಣನವರ ದೃಷ್ಟಿಯಲ್ಲಿ ‘ಶಿವರಾತ್ರಿ’; ರುದ್ರಮಂತ್ರಗಳಲ್ಲಿ ಸಾಮಾಜಿಕ ಚಿತ್ರಣ ಕುರಿತ ಲೇಖನಗಳಿವೆ.
ಭಾರತೀಯರ ಜೀವನಪದ್ಧತಿ ಅತಿ ವಿಶಿಷ್ಟವಾದದ್ದು. ಕಾರಣ - ಅವರ ಬದುಕು ಒಂದು ದಿನ ಹುಟ್ಟುವುದು, ಇನ್ನೊಂದು ದಿನ ಸಾಯುವುದು ಮತ್ತು ಇವುಗಳ ಮಧ್ಯೆ ಒಂದಷ್ಟು ದಿನ ಹಾಗೂ ಹೀಗೂ ಜೀವನ ಸವೆಸುವುದಷ್ಟೇ ಅಲ್ಲ. ಪಶುಗಳೂ ನಡೆಸುವ ಇಂತಹ ಬದುಕಿಗೆ ಯಾವ ಅರ್ಥವೂ ಇಲ್ಲ. ಇದಕ್ಕಿಂತ ಭಿನ್ನವೂ ಇದರ ಜೊತೆಗೂಡಿದ್ದೂ ಆದ ಯಾವ ಅಂತರಂಗದ ಬದುಕುಂಟೋ ಅದೇ ನಿಜವಾದದ್ದು ಎಂದು ಸಾರಿದರು ಭಾರತೀಯ ಮಹರ್ಷಿಗಳು. ಇಂದ್ರಿಯತೃಪ್ತಿ-ಆತ್ಮತೃಪ್ತಿಗಳ ಸಮನ್ವಯದ ಬಾಳಾಟವನ್ನೇ ‘ಜೀವನ’ ಎಂದರು. ಇಹ-ಪರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಅನುಭವಿಸಲೆಂದೇ ಭಗವಂತ ನಮಗೆ ಕೊಟ್ಟ ಅನುಗ್ರಹ ಈ ಮಾನವಶರೀರ. ಈ ಜೀವಕ್ಕೆ ಇದೇ ಜನ್ಮದಲ್ಲೇ ಉತ್ತಮ ಸಂಸ್ಕಾರ ಕೊಡುವುದರ ಮೂಲಕ ಜೀವವು ದೇವನಲ್ಲಿ ಒಂದಾಗಬೇಕು. ಅದಕ್ಕೆಂದೇ ಭಗವಂತ ನಮಗಾಗಿ ಕೊಟ್ಟ ಉತ್ತಮ ಕಾಲಘಟ್ಟವನ್ನು ‘ಹಬ್ಬ’, ‘ಪರ್ವ’, ‘ಮಹೋತ್ಸವ’ ಇತ್ಯಾದಿ ಪದಗಳಿಂದ ಕರೆಯಲಾಗಿದೆ. ‘ಶಿವರಾತ್ರಿ’ ಎಂಬ ವಿಶಿಷ್ಟ ಪರ್ವವೂ ಇಂತಹ ವಿಶೇಷ ಕಾಲಘಟ್ಟಗಳಲ್ಲಿ ಒಂದಾಗಿದೆ. ಶಿವರಾತ್ರಿ ಎಂದರೇನು? ಈ ಆಚರಣೆಯಲ್ಲಿ ಮಹರ್ಷಿಗಳ ಕೊಡುಗೆ ಏನು? ಇದನ್ನು ಹೇಗೆ ಆಚರಿಸಬೇಕು? ಎಂಬಿತ್ಯಾದಿ ವಿಷಯಗಳನ್ನು ತಿಳಿಯೋಣ.
ಪೌರಾಣಿಕ ಹಿನ್ನೆಲೆ: ಒಮ್ಮೆ ಬ್ರಹ್ಮದೇವನು ವೈಕುಂಠಕ್ಕೆ ತೆರಳುತ್ತಾನೆ. ಆಗ ಶ್ರೀದೇವಿ ಭೂದೇವಿಯರಿಂದ ಸೇವೆ ಪಡೆಯುತ್ತಿದ್ದ ವಿಷ್ಣುವು ಬ್ರಹ್ಮದೇವನ ಆಗಮನವನ್ನು ಅಲಕ್ಷಿಸಿದ. ಇದಕ್ಕೆ ಕೋಪಗೊಂಡ ಬ್ರಹ್ಮದೇವ, ‘ಅಯ್ಯಾ ಮಹಾವಿಷ್ಣುವೇ! ಈ ಸೃಷ್ಟಿಕರ್ತಾ ಬ್ರಹ್ಮನೇ ಬಂದರೂ ತಿರಸ್ಕಾರವೇ?’ ಎಂದ. ಅತ್ತ ಮಹಾವಿಷ್ಣುವು ತನ್ನ ಶಯನದಿಂದಲೇ ‘ನಿನಗೆ ಮಂಗಳವಾಗಲಿ! ನೀನೂ ಬಂದು ಈ ಆಸನದಲ್ಲಿ ಕುಳಿತುಕೊ’ ಎಂದನು. ಆ ಕ್ಷಣದಲ್ಲಿ ಬ್ರಹನು ಇನ್ನಷ್ಟು ಕೋಪದಿಂದ, ‘ನಿನ್ನ ರಕ್ಷಕ ನಾನು. ಈ ಸೃಷ್ಟಿಗೇ ಕಾರಣ. ಇಷ್ಟಿದ್ದೂ ನನ್ನನ್ನು ಅಪಮಾನಿಸಿರುವೆಯಲ್ಲ?’ ಎಂದನು. ಆಗ ಮಹಾವಿಷ್ಣುವು, ‘ನನ್ನ ನಾಭಿಕಮಲದಲ್ಲಿ ಹುಟ್ಟಿರುವುದರಿಂದ ನೀನು ನನ್ನ ಮಗ’ ಎಂದನು. ಹೀಗೆ ಇವರಿಬ್ಬರ ಮಧ್ಯೆ ವಿವಾದ ಆರಂಭವಾಯಿತು. ಬ್ರಹ್ಮನು ಪಾಶುಪತವನ್ನೂ ವಿಷ್ಣುವು ಮಾಹೇಶ್ವರಾಸ್ತ್ರವನ್ನೂ ಪ್ರಯೋಗಿಸಲು ಮುಂದಾದರು. ಇದರಿಂದ ಭಯಗ್ರಸ್ತರಾದ ದೇವತೆಗಳು ಶಿವನ ಬಳಿಗೆ ಓಡಿದರು. ಈ ಮೊದಲೇ ವಿಷಯವನ್ನು ತಿಳಿದ ಶಿವನು ‘ನಾನು ಈ ವಿವಾದವನ್ನು ಪರಿಹರಿಸುವೆ’ ಎಂದು ತನ್ನ ಜ್ಯೋತಿರ್ಮಯರೂಪವನ್ನು ಪ್ರಕಟಪಡಿಸಿದನು. ಆಗ ಈ ಎರಡೂ ಅಸ್ತ್ರಗಳೂ ಲಿಂಗದಲ್ಲಿ ಲೀನವಾದವು. ಈ ಅವತಾರದ ದಿನವನ್ನೇ ‘ಮಹಾಶಿವರಾತ್ರಿ’ ಎಂದು ಕರೆಯಲಾಗಿದೆ. (ಈಶಾನಸಂಹಿತಾ)
ಮಹಾಕಾಲನಿಗೆ ಯಾವುದು ಕಾಲ?: ಮಹಾಕಾಲನಾದ ಶಿವನ ಆರಾಧನೆಗೆ ವಿಶೇಷವಾದ ಕಾಲ ಕೃಷ್ಣಪಕ್ಷದ ಚತುರ್ದಶೀ. ಪ್ರತಿ ಮಾಸದಲ್ಲೂ ಕೃಷ್ಣಪಕ್ಷದಲ್ಲಿ ಬರುವ ಚತುರ್ದಶಿಗೂ ಶಿವರಾತ್ರಿ ಎಂದೇ ಹೆಸರು. ಆದರೆ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಗೆ ‘ಮಹಾಶಿವರಾತ್ರಿ’ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ತಿಥಿಯೂ ಒಂದೊಂದು ದೇವತೆಯ ಅಧಿಷ್ಠಾನವಾಗಿರುತ್ತದೆ. ಅಂದರೆ ಆಯಾ ತಿಥಿಯು ಆಯಾ ದೇವತೆಯ ಉಪಾಸನೆಗೆ ಪ್ರಶಸ್ತವಾದ ಕಾಲ ಎಂಬುದಾಗಿ ನಮ್ಮ ಪರಂಪರೆ ಸಾರಿದೆ. ಚತುರ್ದಶಿಗೆ ಶಿವನು ಅಧಿಷ್ಠಾನ ದೇವನಾಗಿರುತ್ತಾನೆ. ಅದರಲ್ಲೂ ರಾತ್ರಿಯು ಶಿವನ ಉಪಾಸನೆಗೆ ಅತ್ಯಂತ ಶ್ರೇಷ್ಠವಾಗಿದೆ. ಶಿವನಿಗೂ ರಾತ್ರಿಗೂ ಸಂಬಂಧವಿದೆ. ಸತ್ತ್ವ-ರಜಸ್ಸು-ತಮಸ್ಸು ಎಂಬ ತ್ರಿಗುಣಗಳಿಗೆ ತ್ರಿಮೂರ್ತಿಗಳಲ್ಲಿ ಕ್ರಮವಾಗಿ ವಿಷ್ಣು-ಬ್ರಹ್ಮ-ಮಹೇಶ್ವರರು ಅಧಿಪತಿಗಳಾಗಿರುತ್ತಾರೆ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಹೀಗೆ ಒಂದೊಂದು ಕಾಲಕ್ಕೂ ಒಂದೊಂದು ದೇವತೆಯ ಪ್ರಾಧಾನ್ಯವಿರುತ್ತದೆ. ರಾತ್ರಿಯಲ್ಲಿ ತಮಸ್ಸಿನ ಆಧಿಕ್ಯವಿರುವುದರಿಂದಗೆ ಶಿವನಿಗೆ ಪ್ರಾಧಾನ್ಯ. ಶಿವನನ್ನು ಸಂಹಾರಕರ್ತಾ ಎಂದು ಕರೆಯಲಾಗುತ್ತದೆ. ಸ್ವಾಭಾವಿಕವಾಗಿ ರಾತ್ರಿಯು ಸಂಹಾರಕಾಲದ ಪ್ರತಿನಿಧಿ. ಇಂದ್ರಿಯಗಳನ್ನು ಸೆಳೆದುಕೊಳ್ಳುವ ಕಾಲ. ಜೀವಿಯು ಕರ್ಮಚೇಷ್ಟೆಗಳನ್ನೆಲ್ಲ ಬಿಟ್ಟು ಚೈತನ್ಯವನ್ನು ಉಪಸಂಹರಿಸಿಕೊಂಡು ನಿದ್ದೆಗೆ ಜಾರುವ ಕಾಲವಿದು. ಸಾಮಾನ್ಯ ಜೀವಿಯು ಜಾಡ್ಯನಿದ್ದೆಯಲ್ಲಿದ್ದರೆ ಮುನಿಯಾದವನು ಆಜಾಡ್ಯನಿದ್ರೆ-ಸಮಾಧಿಯಲ್ಲಿ ಮುಳುಗಿರುತ್ತಾನೆ. ಸಾಧಕನಿಗಿದು ಸಾಧನೆಗೆ ಪರ್ವಕಾಲವಾಗಿದೆ.
ಮನಸಸ್ಪತಿಯ ಜಾಗೃತ ಕಾಲ: ಶುಕ್ಲಪಕ್ಷದಲ್ಲಿ ಚಂದ್ರನು ವೃದ್ಧಿ ಹೊಂದುತ್ತ ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತ ಹೋಗುತ್ತಾನೆ. ಚಂದ್ರನ ಪ್ರಭಾವ ಇಡೀ ಬ್ರಹ್ಮಾಂಡದ ಮೇಲೆ ಬೀರುತ್ತದೆ. ಅಲ್ಲದೆ ಚಂದ್ರನನ್ನು ಮನಸ್ಸಿಗೆ ಅಧಿಪತಿ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಹಾಗಾಗಿ ಚಂದ್ರನ ವೃದ್ಧಿಕ್ಷಯಗಳು ನಮ್ಮ ಮನಸ್ಸಿನ ಮೇಲೂ ಪ್ರಭಾವವನ್ನು ಬೀರದಿರವು. ಈ ಕೃಷ್ಣಪಕ್ಷದ ರಾತ್ರಿಯು ವಿಶೇಷವಾದ ತಮಸ್ಸಿನ ಆವರಣವಾಗಿರುವುದರಿಂದ ಸಾಮಾನ್ಯ ಜೀವಿಯು ಜಾಡ್ಯನಿದ್ದೆಗೆ ಜಾರುವುದು ಸಹಜ. ಈ ಗಾಢವಾದ ತಮಸ್ಸಿನ ಕಾಲವೇ ರಾಕ್ಷಸೀಶಕ್ತಿಗಳು ಜಾಗೃತವಾಗುವ ಸನ್ನಿವೇಶವಿರುತ್ತದೆ. ಇದೇ ಕಾಲವು ತಮಸ್ಸಿನ ಅಧಿಪತಿಗೆ ಪ್ರಿಯವಾದದ್ದು. ಮಂದಮತಿಗಳು ಈ ಕಾಲವನ್ನು ನಿದ್ದೆಯಲ್ಲಿ ಕಳೆಯುತ್ತಾರೆ. ಪ್ರಾಜ್ಞರಾದವರು ಈ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅವರಿಗಿದು ಸಂಧ್ಯಾಕಾಲ.
ಮಧ್ಯರಾತ್ರಿಯನ್ನೂ ಸಂಧ್ಯಾಕಾಲಗಳಲ್ಲಿ ಒಂದೆಂದೂ, ಇದು ಸಾಧನೆಗೆ ಅತ್ಯಂತ ಪ್ರಶಸ್ತ ಎಂದು ತೀರ್ವನಿಸಲಾಗಿದೆ. ಶಿವ ಮತ್ತು ಅವನ ಅನುಚರರು ಸಂಚರಿಸುವ ಕಾಲವೂ ಇದೇ ಆಗಿದೆ. ಇಲ್ಲಿ ಶಿವನ ಸಹಚಾರಿಗಳಾಗಿ ಹೇಳಲ್ಪಟ್ಟಿರುವ ಭೂತಗಳು ಭಯ ಅಥವಾ ಬೀಭತ್ಸಗಳಿಗೆ ಕಾರಣರಾಗಿರುವ ಜೀವಿಗಳಲ್ಲ. ಜ್ಞಾನಿ ಭಕ್ತರಾದ ಪರಿವಾರಗಳು. ಆರಾಧಿಸುವವರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವ ಶಕ್ತಿ ಇವುಗಳಿಗಿದೆ. ಅವು ಸಂಹಾರಕಾರ್ಯದಲ್ಲೂ ಶಿವನಿಗೆ ಸಹಾಯ ಮಾಡುತ್ತವೆ ಎಂಬ ಶ್ರೀರಂಗಮಹಾಗುರುಗಳ ವ್ಯಾಖ್ಯಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಪವಾಸ: ‘ಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ | ಅಹಂ ವತ್ಸ್ಯಾಮಿ ಭೂಪೃಷ್ಠೇ ರಾತ್ರೌ ನೈವ ದಿವಾ ಕಲೌ || (ನಾಗರಖಂಡ) ಎಂಬ ವಚನಾನುಸಾರ ಮಾಘ ಕೃಷ್ಣ ಚತುರ್ದಶಿಯು ಮಹಾಶಿವರಾತ್ರಿ ಎಂದು ಪರಿಗಣಿತವಾಗಿದೆ. ಉಪವಾಸವು ಈ ವ್ರತದಲ್ಲಿ ಬಹುಮುಖ್ಯವಾದ ಅಂಗ. ‘ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ’ ಎಂಬ ಗೀತಾಚಾರ್ಯನ ಮಾತಿನಂತೆ ಆಹಾರವನ್ನು ಬಳಸದೆ ಇರುವುದು ವಿಷಯಲಾಲಸೆಯನ್ನು ದೂರಮಾಡುವುದು. ಆಗ ಇಂದ್ರಿಯನಿಗ್ರಹ ಮತ್ತು ಮನೋನಿಗ್ರಹ ಸುಲಭ. ನಿಗ್ರಹವೇ ಇಲ್ಲಿ ಮುಖ್ಯ ಉದ್ದೇಶವೇ ಹೊರತು ಕೇವಲ ಆಹಾರವನ್ನು ಬಳಸದಿರುವುದು ಎಂದೂ ಅಲ್ಲ. ಮತ್ತು ನಿಗ್ರಹವುಳ್ಳವನಿಗೆ ಹಸಿವು ಬಾಯಾರಿಕೆಗಳ ಪರಿವೆಯೇ ಇರದು. ಇದನ್ನೇ ಉಪವಾಸ ಎಂದು ಮಹರ್ಷಿಗಳು ಕರೆದಿದ್ದಾರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗು ಅಶಕ್ತರಾದವರು ಭಗವಂತನ ಪೂಜೆಗೆ ತೊಡಕು ಉಂಟಾಗದ ರೀತಿಯಲ್ಲಿ ಆಹಾರವನ್ನು ಬಳಸಿದರೆ ತಪ್ಪಲ್ಲ ಎಂದು ಶಾಸ್ತ್ರಗಳು ವಿಧಿಸಿವೆ. ಈ ಉಪವಾಸವು ಎಲ್ಲ ಪಾಪಗಳನ್ನು ಪರಿಹರಿಸಿ ನಮ್ಮನ್ನು ಉದ್ಧಾರ ಮಾಡುವ ಉತ್ತಮವಾದ ವ್ರತಾಂಗವಾಗಿದೆ.
ಜಾಗರಣ: ಜಾಗರಣವು ಶಿವರಾತ್ರಿಯ ಇನ್ನೊಂದು ಮುಖ್ಯ ಅಂಗ. ಜಾಗರಣ ಎಂದರೆ ಎಚ್ಚರವಾಗಿರುವುದು. ಈ ದಿನ ಮಾಡಿದ ಜಾಗರಣವು ಇಹದಲ್ಲಿ ಭೋಗಕ್ಕೆ ಬೇಕಾದ ಸಂಪತ್ತನ್ನೂ, ಪರದ ಭೋಗಕ್ಕೆ ಬೇಕಾದ ವೈರಾಗ್ಯವನ್ನೂ ಕೊಡುವುದಾಗಿದೆ. ಆದ್ದರಿಂದ ಈ ದಿನ ಮಾಡುವ ಜಾಗರಣಕ್ಕೆ ಅಷ್ಟೊಂದು ವಿಶೇಷತೆ ಇದೆ. ಹಾಗಾದರೆ ಜಾಗರಣೆ ಎಂದರೆ ಕೇವಲ ನಿದ್ದೆ ಮಾಡದೆ ಎಚ್ಚರವಾಗಿರುವುದು ಎಂದರ್ಥವಲ್ಲ. ನಮ್ಮ ಇಂದ್ರಿಯ, ದೇಹ, ಮನಸ್ಸು ಇವುಗಳನ್ನೆಲ್ಲ ಅತ್ಯಂತ ಪಟುವಾಗಿಸಿಕೊಂಡು ಅವುಗಳಿಂದ ಭಗವಂತನನ್ನು ಪೂಜಿಸಬೇಕು, ಸ್ತೋತ್ರ ಮಾಡಬೇಕು, ಧ್ಯಾನಿಸಬೇಕು ಎಂದರ್ಥ. ನಮ್ಮೆಲ್ಲ ಇಂದ್ರಿಯಗಳನ್ನೂ ಭಗವಂತನಿಗಾಗಿ ಮೀಸಲಿಡುವ ಪವಿತ್ರ ಕಾಲವೇ ಜಾಗರಣ. ಹೊರತು ಎಚ್ಚರವಾಗಿದ್ದುಕೊಂಡು ಇನ್ನಾವುದೋ ಬಹಿಮುಖವಾದ ವ್ಯಾಪಾರದಲ್ಲೋ, ಮೋಜು ಮಸ್ತಿಯಲ್ಲೋ ಕಾಲಹರಣ ಮಾಡುವುದು ಖಂಡಿತ ಜಾಗರಣ ಆಗಲಾರದು. ಇದು ಭಗವಂತನಿಗೆ ಮಾಡುವ ಅಪಚಾರ. ಸ್ತ್ರೀಯರು, ಪುರುಷರು, ಎಲ್ಲ ಜಾತಿಜನಾಂಗದವರೂ ಈ ಜಾಗರಣವನ್ನು ಮಾಡಬಹುದು. ಯಾರು ಭಗವಂತನ ಮಡಿಲನ್ನು ಸೇರಿ ಈ ಸಂಸಾರಬಂಧನದಿಂದ ಮುಕ್ತಿ ಪಡೆಯಬೇಕು ಎಂದು ಅಪೇಕ್ಷಿಸುತ್ತಾರೋ ಅಂತಹವರಿಗೆ ಮಾತ್ರ ವ್ರತನಿಯಮಗಳೆಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಶಿವನು ತಮಸ್ಸಿಗೆ ಅಧಿದೇವತೆ, ಸಂಹಾರಕ ಅಂದರೆ ಕೊಲ್ಲುವವನು. ಹೀಗಿದ್ದೂ ಇಂತಹ ದೇವರನ್ನು ಪೂಜಿಸುವುದು ಮೂರ್ಖತನವಲ್ಲವೇ? ಇಂತಹ ದೇವರ ಪೂಜೆಯಿಂದ ಫಲವಾದರೂ ಏನು? ಇವೇ ಮೊದಲಾದ ಪ್ರಶ್ನೆಗಳು ಮೂಡುವುದು ಸಹಜ. ಈ ಸೃಷ್ಟಿಯಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸು ಈ ಮೂರೂ ಗುಣಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಾಮರಸ್ಯ ಇರಲು ಸಾಧ್ಯ. ಒಬ್ಬ ಮನುಷ್ಯ ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲವೂ ಅವಿಶ್ರಾಂತವಾಗಿ ಕೆಲಸದಲ್ಲಿ ನಿರತನಾದರೆ ಆರೋಗ್ಯ ಕೆಡುವುದಿಲ್ಲವೇ? ಕಾಲಕಾಲಕ್ಕೆ ನಿದ್ದೆಯನ್ನು ಮಾಡಿ ಕೆಲಸವನ್ನು ಮಾಡಿದರೆ ಆರೋಗ್ಯವಾಗಿ ಬದುಕಬಹುದು. ಹಾಗೆಯೇ ಜೀವಿಗಳು ಕರ್ಮಫಲಗಳನ್ನು ಅನುಭವಿಸಿ ಬಳಲಿದಾಗ ವಿಶ್ರಾಂತಿ ಪಡೆಯಲು ಅವನು - ಮರಣರೂಪವಾದ ವಿಶ್ರಾಂತಿಯನ್ನು ಕರುಣಿಸುವ ಕರುಣಾಮಯನಾದ ದೇವನೇ ಆಗಿದ್ದಾನೆ.
ಜಾಗೃತ್ತಿಗೆ ಹೇಗೆ ರಜಸ್ಸು ಕಾರಣವೋ. ಸಮಾಧಾನಕ್ಕೆ ಸತ್ತ್ವಗುಣ ಕಾರಣ. ನಿದ್ದೆಗೆ ತಮಸ್ಸು ಕಾರಣ. ಶಿವನ ಅನುಗ್ರಹದಿಂದಲೇ ನಾವು ನಿತ್ಯವೂ ಸುಖವಾಗಿ ನಿದ್ರಿಸುತ್ತಿದ್ದೇವೆ. ಯಾವುದೇ ಗುಣವು ವ್ಯತ್ಯಾಸವಾದರೂ ಸೃಷ್ಟಿಯಲ್ಲಿ ಏರುಪೇರು ಸಹಜ. ಒಬ್ಬ ಸಾಧಕನು ಈ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಈ ಮೂರೂ ಗುಣಗಳ ಅಧಿಷ್ಠಾನ ದೇವತೆಗಳ ಪ್ರಸಾದ ಅತಿ ಮುಖ್ಯ. ನಮ್ಮ ಜೀವನಕ್ಕೆ ಅಡ್ಡಿಪಡಿಸುವ ರಾಕ್ಷಸೀಸ್ವಭಾವನ್ನು ನಾಶಪಡಿಸುವುದು ಸಂಹಾರಕಾರ್ಯವಾದರೂ ಇದರಿಂದ ಜೀವಸಂಕುಲಕ್ಕೆ ಒಳಿತೇ. ಇಂತಹ ದೇವರನ್ನು ಪೂಜಿಸುವುದರಿಂದ ಜೀವಕ್ಕೆ, ಜೀವನಕ್ಕೆ ಹೊಸ ಉತ್ಸಾಹವನ್ನು ಕೊಡುತ್ತದೆ. ನಮ್ಮ ಮಹರ್ಷಿಗಳ ಯಾವ ಉದ್ಘೋಷವಿದೆಯೋ ಪುರುಷಾರ್ಥಮಯ ಬಾಳಾಟ ಇದೇ ಮಾನವನ ಚರಮ ಮತ್ತು ಪರಮ ಲಕ್ಷ್ಯ. ಇದನ್ನು ಪಡೆಯಲು ಶಿವರಾತ್ರಿಮಹೋತ್ಸವವು ಸಾಧನವಾಗಲಿ.
ಪೂಜಾವಿಧಾನ
ಶಿವರಾತ್ರಿಯ ದಿನ ಇಡೀ ರಾತ್ರಿ ಪೂಜೆಯನ್ನು ಮಾಡಬೇಕು. ನಾಲ್ಕೂ ಯಾಮಗಳೂ ಪೂಜಾಯೋಗ್ಯವಾಗಿವೆ. ಶಿವಲಿಂಗ ಅಥವಾ ಕಲಶದಲ್ಲಿ ಶಿವನನ್ನು ಆವಾಹಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. ಅಭಿಷೇಕವು ಶಿವನಿಗೆ ಅತ್ಯಂತ ಶ್ರೇಷ್ಠ. ಹಾಗಾಗಿ ಮೊದಲನೆಯ ಯಾಮದಲ್ಲಿ ಹಾಲಿನಿಂದ, ಎರಡನೆ ಯಾಮದಲ್ಲಿ ಮೊಸರಿನಿಂದ, ಮೂರನೆ ಯಾಮದಲ್ಲಿ ತುಪ್ಪದಿಂದ ಮತ್ತು ನಾಲ್ಕನೆ ಯಾಮದಲ್ಲಿ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು. ಅಭಿಷೇಕದ ಜೊತೆ ಯಜುರ್ವೆದದಲ್ಲಿ ಬರುವ ರುದ್ರಾನುವಾಕ ಮಂತ್ರವನ್ನು ಪಠಿಸಬೇಕು. ಪಂಚಾಮೃತ, ಗಂಧ, ಕುಂಕುಮ, ಕರ್ಪರ, ತೀರ್ಥ, ಸುವರ್ಣತೀರ್ಥಗಳಿಂದ ಶಿವನಿಗೆ ಅಭಿಷೇಕ ಮಾಡಬೇಕು. ಎಕ್ಕೆ, ಕರವೀರ, ಬಿಲ್ವ ಬಕುಲ ಇವು ಶಂಕರನಿಗೆ ಪ್ರಿಯಕರ. ಇವುಗಳಲ್ಲೂ ಬಿಲ್ವಪತ್ರೆ ಅತ್ಯಂತ ಶ್ರೇಷ್ಠವಾಗಿದೆ. ಮೂರು ದಳಗಳು ತ್ರಿಮೂರ್ತಿಗಳ ಪ್ರತಿರೂಪ. ಲಿಂಗಾಷ್ಟಕ, ಬಿಲ್ವಾಷ್ಟಕ ಮೊದಲಾದ ಸ್ತೋತ್ರಗಳಿಂದ ಶಿವನನ್ನು ಸ್ತುತಿ ಮಾಡಬೇಕು. ಶಿವ ಅಷ್ಟೋತ್ತರ ಅಥವಾ ಸಹಸ್ರನಾಮಗಳಿಂದ ಅರ್ಚನೆ, ಶಿವಕಥಾಶ್ರವಣ, ಭಜನ, ಶಿವನಾಮಸಂಕೀರ್ತನ, ಹೀಗೆ ಶಿವಮಯವಾಗಿ ಜಾಗರೂಕರಾಗಿ ರಾತ್ರಿಯನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಮರುದಿನ ಬೆಳಗ್ಗೆ ಪಾರಣೆ (ವ್ರತಾಂತ ಭೋಜನ) ಮಾಡಿ ಶಿವರಾತ್ರಿವ್ರತವನ್ನು ಪೂರ್ಣಗೊಳಿಸಬೇಕು.
ವಿದ್ವಾನ್ ನರಸಿಂಹ ಭಟ್ಟ