Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಧು, ಸಂತರು ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳ ಜನಸಾಗರವೇ ಹರಿದಬಂದಿದ್ದು, ಭಕ್ತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.
ಇದನ್ನೂ ಓದಿ: ಆತಂಕ ಹುಟ್ಟಿಸಿದ ಜಿಬಿಎಸ್ ಸಿಂಡ್ರೋಮ್; ಪುಣೆಯಲ್ಲಿ ನೂರಕ್ಕೂ ಅಧಿಕ ಪ್ರಕರಣ ವರದಿ: ಸೊಲ್ಲಾಪುರದಲ್ಲಿ ಒಬ್ಬ ಸಾವು
ಭಾರತದಲ್ಲಿ ನಡೆಯುವ ಅತಿ ದೊಡ್ಡ ಉತ್ಸವವೇ ಈ ಕುಂಭಮೇಳ. ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳದಲ್ಲಿ ನಾಗಸಾಧು, ಸಂತರು, ಭಕ್ತಾಧಿಗಳು ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಮಹಾಕುಂಭ ಮೇಳವು ಸದ್ಯ ಜನಮನ ಸೆಳೆದಿದ್ದು, ಹಲವು ಅಚ್ಚರಿ ಹಾಗೂ ವಿಶೇಷ ಸಂಗತಿಗಳಿಗೆ ಸಾಕ್ಷಿಯಾಗಿದೆ. ಈ ಹಿಂದೆಯೇ ಹೇಳಿದಂತೆ ವಿಶ್ವಪ್ರಸಿದ್ಧ ಕುಂಭ ಮೇಳವು ಕೇವಲ ಡ್ರೋನ್ನಲ್ಲಿ ಮಾತ್ರವಲ್ಲ ಬಾಹ್ಯಾಕ್ಯಾಶದಿಂದಲೂ ಕಾಣಿಸುತ್ತದೆ. ಅದಕ್ಕೆ ಈ ಫೋಟೋಗಳೇ ಜ್ವಲಂತ ಸಾಕ್ಷಿ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ಭೂಮಿಯ ಮೇಲೆ ಮಾತ್ರವಲ್ಲದೆ ಬಾಹ್ಯಾಕಾಶದಿಂದಲೂ ಈಗ ಕೋಟ್ಯಂತರ ಜನರ ಗಮನ ಸೆಳೆದಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾ ಗಗನಯಾತ್ರಿ ಡಾನ್ ಪೆಟ್ಟಿಟ್, ಬಾನಿನಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಭವ್ಯತೆ ಹೇಗೆ ಕಾಣಿಸುತ್ತಿದೆ ಎಂಬುದನ್ನು ಒಂದಷ್ಟು ಫೋಟೋ ಮೂಲಕ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.
ಅಸಾಧಾರಣ ಖಗೋಳ ಛಾಯಾಗ್ರಹಣಕ್ಕೆ ಹೆಸರುವಾಸಿಯಾದ ಡಾನ್ ಪೆಟ್ಟಿಟ್, "ರಾತ್ರಿಯಲ್ಲಿ ಐಎಸ್ಎಸ್ನಿಂದ ಮಹಾ ಕುಂಭಮೇಳ ಗಂಗಾ ನದಿ ತೀರ್ಥಯಾತ್ರೆ. ಕೋಟ್ಯಂತರ ಭಕ್ತಾಧಿಗಳು ಮಿಂದೇಳುತ್ತಿರುವ ಕುಂಭ ಮೇಳ ಬೆಳಗುತ್ತಿದೆ" ಎಂದು ಜಾಲತಾಣದಲ್ಲಿ ಬರೆದು ಹಂಚಿಕೊಂಡಿದ್ದಾರೆ. ಪ್ರಯಾಗ್ರಾಜ್ನ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಚಿತ್ರಗಳು ನೋಡುಗರನ್ನು ಬೆರಗುಗೊಳಿಸಿದೆ. ಬಾಹ್ಯಾಕಾಶದಿಂದ ಕಂಡ ಮಹಾಕುಂಭ ಮೇಳದ ದೃಶ್ಯಗಳು ಸದ್ಯ ನೆಟ್ಟಿಗರ ಮನಸೂರೆಗೊಳಿಸಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ,(ಏಜೆನ್ಸೀಸ್).