ಬಸ್ತರ್: ಸಾಮಾನ್ಯವಾಗಿ ಒಂದು ದೀಪ ಎಷ್ಟು ಹೊತ್ತು ಉರಿಯಬಹುದು? ಒಂದು ಗಂಟೆ ಅಥವಾ ಎರಡು ಗಂಟೆ. ಆದರೆ ಇಲ್ಲೊಬ್ಬ ವ್ಯಕ್ತಿ ತಯಾರಿಸಿರುವ ದೀಪ ಬರೋಬ್ಬರಿ 24 ಗಂಟೆಗಳ ಕಾಲ ಉರಿಯುತ್ತಲೇ ಇರುತ್ತದೆ. ಛತ್ತೀಸಗಢದ ಮಾಂತ್ರಿಕ ಕುಂಬಾರನ ಕೈನಲ್ಲಿ ತಯಾರಾಗುತ್ತಿರುವ ಈ ದೀಪಗಳು ಪೂರ್ತಿ ಒಂದು ದಿನ ಬೆಳಕು ಕೊಡುತ್ತದೆ.
ಬಸ್ತರ್ ಜಿಲ್ಲೆಯ ಕೊಂಡಗಾಂವ್ ಹೆಸರಿನ ಸಣ್ಣ ಹಳ್ಳಿಯೊಂದರಲ್ಲಿ ಕುಂಬಾರ ಕೆಲಸ ಮಾಡುವ ಅಶೋಕ್ ಚಕ್ರಹರಿ ಇದೀಗ ತಮ್ಮ ಮ್ಯಾಜಿಕ್ ದೀಪಗಳಿಂದ ಪೂರ್ತಿ ದೇಶಕ್ಕೆ ಪರಿಚಿತರಾಗಿದ್ದಾರೆ. ಇವರು ಒಂದು ಸ್ಟಾಂಡ್, ಅದರ ಮೇಲೊಂದು ದೀಪ, ಅದರ ಮೇಲೊಂದು ಡೂಮ್ ರೀತಿಯಲ್ಲಿ ತಯಾರಿಸುತ್ತಾರೆ. ಮೇಲಿನ ಡೂಮ್ನಲ್ಲಿ ಎಣ್ಣೆ ತುಂಬಿಸಿಟ್ಟುಕೊಳ್ಳಬಹುದು. ದೀಪದಲ್ಲಿ ಎಣ್ಣೆ ಖಾಲಿಯಾದಾಗ ನಾವು ಎಣ್ಣೆ ಹಾಕಬೇಕೆನ್ನುವ ತಾಪತ್ರಯವೇ ಇಲ್ಲ. ಅದನ್ನೂ ಕೂಡ ದೀಪವೇ ಮಾಡಿಕೊಳ್ಳುತ್ತದೆ.
ಅಶೋಕ್ ಅವರು ಈ ಮ್ಯಾಜಿಕ್ ದೀಪ ತಯಾರಿಸುವುದಕ್ಕೂ ಮುನ್ನ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಮಾಮೂಲಿ ದೀಪಗಳ ಹೊರೆತಾಗಿ ಹೊಸ ರೀತಿಯ ದೀಪ ತಯಾರಿಸಬೇಕು ಎನ್ನುವ ಆಲೋಚನೆ 2019ರ ದೀಪಾವಳಿ ಸಮಯದಲ್ಲಿ ಬಂದಿತ್ತಂತೆ. ಅದಾದ ನಂತರ ಯೂಟ್ಯೂಬ್ ಮೊರೆ ಹೋದ ಅಶೋಕ್ ನೂರಾರು ವಿಡಿಯೋಗಳನ್ನು ನೋಡಿದ್ದಾರೆ. ದೀಪದಲ್ಲಿ ಯಾವ ರೀತಿಯ ವಿಶೇಷತೆ ತರಬಹುದು ಎನ್ನುವುದನ್ನು ವಿಡಿಯೋಗಳ ಮೂಲಕ ಕಲಿತುಕೊಂಡಿದ್ದಾರೆ. ಇದೀಗ ಅವರ ಮ್ಯಾಜಿಕ್ ದೀಪಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾವಿರಾರು ಜನರು ಈ ದೀಪಾವಳಿಯಲ್ಲಿ ಮ್ಯಾಜಿಕ್ ದೀಪದಿಂದ ನಂದಾದೀಪ ಬೆಳಗುವ ಆಶಯ ತೋರಿಸಿದ್ದಾರೆ ಎನ್ನುತ್ತಾರೆ ಮಾಂತ್ರಿಕ ಕುಂಬಾರ ಅಶೋಕ್.