ನ್ಯೂಸ್

ವೇಶ್ಯಾವಾಟಿಕೆಗೆ ರಕ್ಷಣೆ ಕೊಡಿ ಎಂದು ಹೈಕೋರ್ಟ್​ನಲ್ಲಿ ವಕೀಲನ ಮನವಿ! ನಂತರ ಏನಾಯ್ತು ಗೊತ್ತಾ?

ಚೆನ್ನೈ: ವೇಶ್ಯಾವಾಟಿಕೆಗೆ ರಕ್ಷಣೆ ಕೊಡಿ ಎಂದು ವಕೀಲರೊಬ್ಬರು ಮದ್ರಾಸ್​ ಹೈಕೋರ್ಟ್​ನಲ್ಲಿ ವಿಚಿತ್ರವಾದ ಬೇಡಿಕೆಯೊಂದನ್ನು ಮುಂದಿಟ್ಟ ಪ್ರಸಂಗ ಇತ್ತಿಚೀಗಷ್ಟೇ ನಡೆದಿದೆ. ವಕೀಲನ ಬೇಡಿಕೆಯಿಂದ ಒಂದು ಕ್ಷಣ ಆಘಾತಕ್ಕೆ ಒಳಗಾದ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿ, ವಕೀಲನಿಗೆ ಶಾಕ್​ ನೀಡಿದೆ.

ಬೇಡಿಕೆ ಇಟ್ಟ ವಕೀಲನಿಗೆ ಕೂಡಲೇ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ, ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ವಕೀಲರ ಪರಿಷತ್ತಿಗೆ ಹೈಕೋರ್ಟ್​ ಸೂಚಿಸಿದೆ.

ಘಟನೆ ಹಿನ್ನೆಲೆ: ಕನ್ಯಾಕುಮಾರಿಯ ನಾಗರಕೋಯ್ಲಿ ಎಂಬ ಪ್ರಾಂತ್ಯದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು, ರಾಜ ಮುರುಗನ್​ ಹೆಸರಿನ ವಕೀಲನ ಪಾತ್ರ ಇರುವುದನ್ನು ಗುರುತಿಸಿ ಅವರ ವಿರುದ್ಧ ಎಫ್​ಐಆರ್ ಹಾಕಿದ್ದಾರೆ. ಈ ಕುರಿತು ಎಫ್​ಐಆರ್ ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ವಕೀಲ ಇಂತಹ ವಿಚಿತ್ರ ಬೇಡಿಕೆ ಇಟ್ಟಿದ್ದ.

ವಯಸ್ಕರ ನಡುವೆ ಒಪ್ಪಿಗೆಯ ಲೈಂಗಿಕ ಕ್ರಿಯೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಎಣ್ಣೆ ಮಸಾಜ್​ನಂತಹ ಸೇವೆಯನ್ನು ಪೂರೈಸುತ್ತಿದ್ದೇನೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮುಂದೆ ವಕೀಲ ಮೊಂಡುವಾದವನ್ನು ಮಂಡಿಸಿದ್ದ. ಅಲ್ಲದೆ, ತನ್ನ ಬಂಧನವು ಸುಪ್ರೀಂಕೋರ್ಟ್​ ಆದೇಶಕ್ಕೆ ವಿರುದ್ಧವಾಗಿದೆ ಅಂತಾನೂ ಹೇಳಿದ್ದ. ಈ ವೇಳೆ ವಕೀಲನಿಗೆ ಬುದ್ಧಿವಾದ ಹೇಳಿದ ಹೈಕೋರ್ಟ್​, ಬುಧದೇವ್​ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ತಿಳಿಹೇಳಿತು.

ಬುಧದೇವ್​ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆ ತಡೆಯುವ ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ತೀರ್ಪು ನೀಡಲಾಗಿದೆ ಎಂದು ಹೈಕೋರ್ಟ್​ ಹೇಳಿದೆ. ಇನ್ನು ಆರೋಪಿ ಮುರುಗನ್​ ಅಪ್ರಾಪ್ತೆಯ ಬಡತನವನ್ನೇ ದುರ್ಬಳಕೆ ಮಾಡಿಕೊಂಡು, ಹಣದ ಆಮಿಷವೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವುದು ತಿಳಿದುಬಂದಿದ್ದು, ಆತನ ವಿರುದ್ಧ ಕೋರ್ಟ್​ ಆಕ್ರೋಶ ಹೊರಹಾಕಿ, ದಂಡ ಹಾಕಿ ಆತನ ಅರ್ಜಿಯನ್ನು ವಜಾ ಮಾಡಿದೆ. (ಏಜನ್ಸೀಸ್)