ನ್ಯೂಸ್

ಹಾಸ್ಟೆಲ್​ ಮೇಲ್ವಿಚಾರಣೆ ವೇಳೆ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ, ಅಧಿಕಾರಿಯ ಬಂಧನ

ಝಬುವಾ: ಬಾಲಕಿಯರ ಹಾಸ್ಟೆಲ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಸರ್ಕಾರಿ ಅಧಿಕಾರಿಯನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ಝಬುವಾ ಎಂಬಲ್ಲಿ ನಡೆದಿದೆ.

ಅಧಿಕಾರಿಯನ್ನು ಸುನಿಲ್ ಕುಮಾರ್ ಝಾ ಎಂದು ಗುರುತಿಸಲಾಗಿದ್ದು, ಕಳೆದ ಭಾನುವಾರ ಬುಡಕಟ್ಟು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಯು ಬಾಲಕಿಯರಿಗೆ ಅನುಚಿತ ಮತ್ತು ಲೈಂಗಿಕ ಸಂಬಂಧಿತ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ, ಕನಿಷ್ಠ ಮೂವರು ಹುಡುಗಿಯರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

ಇದನ್ನೂ ಓದಿ: VIDEO| ತುಂಡು ತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆ

ಘಟನೆಯ ನಂತರ ಹುಡುಗಿಯರು ಆಘಾತಕ್ಕೊಳಗಾಗಿದ್ದಾರೆ ಎಂದು ಹಾಸ್ಟೆಲ್ ಸೂಪರಿಂಟೆಂಡೆಂಟ್ ಹೇಳಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ವರ್ಷಾ ಸೋಲಂಕಿ, ಈ ಬಗ್ಗೆ ತನಿಖೆ ನಡೆಸಿದ್ದು ಆರೋಪ ಸತ್ಯವಾಗಿದೆ. ತದ ನಂತರ ಜಿಲ್ಲಾಧಿಕಾರಿಗಳು ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಲು ವಿಭಾಗೀಯ ಆಯುಕ್ತರಿಗೆ ಶಿಫಾರಸು ಮಾಡುವುದರ ಜತೆಗೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದಾರೆ.

ಪೋಕ್ಸೊ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಬೆದರಿಕೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಂಗಳವಾರ ಬೆಳಿಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಸುನೀಲ್​ರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್​​)