ನ್ಯೂಸ್

ಚಲಿಸುತ್ತಿದ್ದ ಕಾರಿನಲ್ಲೇ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮನೆಗೇ ವಿಡಿಯೋ ಕಳಿಸಿ ಬ್ಲಾಕ್​ಮೇಲ್

ಗ್ವಾಲಿಯರ್: ಚಲಿಸುತ್ತಿದ್ದ ಕಾರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮನಕಲಕುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಅತ್ಯಾಚಾರ ನಡೆಸಿದ ಆರೋಪಿಗಳು ಅಪ್ರಾಪ್ತ ಬಾಲಕಿಯ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿ ಆಕೆಯ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾರೆ ಈ ಘಟನೆ ಸಂಬಂಧಿಸಿದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಮೋಹನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, 13 ವರ್ಷದ ಬಾಲಕಿ ಇನ್‌ಸ್ಟಾಗ್ರಾಮ್ ಮೂಲಕ ಮೂವರು ಆರೋಪಿಗಳಲ್ಲಿ ಒಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಈ ಘಟನೆ ನಡೆದ ದಿನ ಆರೋಪಿ ಅವಳನ್ನು ಭೇಟಿಯಾಗಲು ಕರೆದಿದ್ದ. ಅಲ್ಲಿ ಅವನು ಇತರ ಇಬ್ಬರು ಸ್ನೇಹಿತರೊಂದಿಗೆ ಕಾರಿನಲ್ಲಿ ಕಾಯುತ್ತಿದ್ದ.

ಅಲ್ಲಿಗೆ ಆ ಬಾಲಕಿ ಬಂದ ತಕ್ಷಣ ಕಾರಿನಲ್ಲಿ ಹೋಗುವ ನೆಪದಲ್ಲಿ ಅವಳನ್ನು ಕರೆದೊಯ್ದರು. ಆಕೆ ಒಳಗೆ ಬಂದ ನಂತರ ಆಕೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದು ಒಬ್ಬೊಬ್ಬರಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಮತ್ತೊಬ್ಬ ಸ್ನೇಹಿತ ಕೃತ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ವೇಳೆ ಆರೋಪಿಗಳು ವಿಡಿಯೋ ಮಾಡಿ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿ ಮತ್ತೆ ಭೇಟಿಯಾಗುವಂತೆ ಕರೆದಿದ್ದಾರೆ. ಅದಕ್ಕೆ ಆಕೆ ನಿರಾಕರಿಸಿದಾಗ ಅವರು ಆ ವಿಡಿಯೋವನ್ನು ಆಕೆಯ ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾರೆ.

ಆಕೆಯನ್ನು ಕುಟುಂಬದವರು ಮೋಹನಾ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, 3ನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.  ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನಿರಂಜನ್ ಶರ್ಮಾ ತಿಳಿಸಿದ್ದಾರೆ.