ನ್ಯೂಸ್

ಮಧ್ಯಪ್ರದೇಶ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಉಚಿತ ವಿದ್ಯುತ್, ಕೃಷಿ ಸಾಲ ಮನ್ನಾ, ಜಾತಿ ಗಣತಿ ಭರವಸೆ

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು ಭೋಪಾಲ್‌ನಲ್ಲಿ ಇದನ್ನು ಅನಾವರಣಗೊಳಿಸಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಇದರಲ್ಲಿ ಯುವಕರು, ಮಹಿಳೆಯರು ಮತ್ತು ರೈತರ ಕಡೆ ಹೆಚ್ಚು ಗಮನಹರಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

"ನಮ್ಮ ಪ್ರಣಾಳಿಕೆಗೆ 9,000 ಕ್ಕೂ ಹೆಚ್ಚು ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ನಾನು ಮಧ್ಯಪ್ರದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರತಿಯೊಂದು ಸಲಹೆಯೂ ತನ್ನದೇ ಆದ ಅಂಶದಲ್ಲಿ ಮಹತ್ವದ್ದಾಗಿದೆ" ಎಂದು ಕಮಲ್ ನಾಥ್ ಅವರು ಎಂಪಿ ಅಸೆಂಬ್ಲಿ ಚುನಾವಣೆ 2023 ರ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ಹೇಳಿದ್ದಾರೆ.

ಕಾಂಗ್ರೆಸ್ ನೀಡಿದ ಭರವಸೆಗಳು

* ಜಾತಿ ಗಣತಿ ನಡೆಸುವುದು ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.

* ಹಳೆಯ ಪಿಂಚಣಿ ಯೋಜನೆ (OPS) ಜಾರಿಯಿಂದ ಹಿಡಿದು 100 ಯೂನಿಟ್‌ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ 1,500 ರೂ. ಮತ್ತು ಕೃಷಿ ಸಾಲ ಮನ್ನಾ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಮಾತ್ರ "ಖಾತರಿ".

* ಕಳೆದ ವಾರದ ಆರಂಭದಲ್ಲಿ ನಡೆದ ರಾಲಿಯಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿದ್ದರು, ಇದರ ಅಡಿಯಲ್ಲಿ 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 500 ರೂ., 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ 1,000 ರೂ. ಮತ್ತು 11 ಮತ್ತು 12 ನೇ ವಿದ್ಯಾರ್ಥಿಗಳಿಗೆ 1,500 ರೂ. ನೀಡಲಾಗುವುದು.

ನವೆಂಬರ್ 17 ರಂದು ಮತದಾನ

ಮಧ್ಯಪ್ರದೇಶದ 230 ಸ್ಥಾನಗಳಿಗೆ ಒಂದೇ ಹಂತದಲ್ಲಿ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ವಿರೋಧ ಪಕ್ಷವು ಇದುವರೆಗೆ 230 ಸ್ಥಾನಗಳ ಪೈಕಿ 144 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.