ಬೆಂಗಳೂರು :ಮದ್ಯದ ಪಾರ್ಟಿ ಮುಗಿಸಿ ಮನೆಗೆ ಬರುವಾಗ ಮಾರ್ಗ ಮಧ್ಯೆ ಸಿಕ್ಕಿಂ ಮೂಲದ ವ್ಯಕ್ತಿಗೆ ಮೂರು ದುಷ್ಕರ್ಮಿಗಳು ಚೈನೀಸ್ ಎಂದು ರೇಗಿಸಿ ಹಲ್ಲೆ ಮಾಡಿದ್ದರು ಎಂಬ ಆರೋಪದ ಕೇಳಿ ಬಂದಿತ್ತು. ಆದರೆ ಇದು ಸುಳ್ಳು ಎಂಬುದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ.
ಹಲ್ಲೆ ಆರೋಪದಡಿ ದೂರು ನೀಡಿದ್ದ ಸಿಕ್ಕಂ ಮೂಲದ ದಿನೇಶ್ ಸುಬ್ಬ(೩೦) ಮದ್ಯದ ಅಮಲಿನಲ್ಲಿ ಕಟ್ಟಡವೊಂದರ ಮೆಟ್ಟಿಲುಗಳ ಮೇಲಿಂದ ಆಯ ತಪ್ಪಿ ಬಿದ್ದು ಗಾಯಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪಶ್ಚಿಮ ಸಿಕ್ಕಂ ಮೂಲದ ದಿನೇಶ್ ಸುಬ್ಬ ಕಳೆದ ಏಳು ತಿಂಗಳಿಂದ ಎಲೆಕ್ಟ್ರಾನಿಕ್ ಸಿಟಿಯ ರೆಸ್ಟೋರೆಂಟ್‌ವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಮತ್ತು ಮೂರು ತಿಂಗಳ ಮಗು ಜತೆಗೆ ದೊಡ್ಡತೋಗೂರಿನಲ್ಲಿ ನೆಲೆಸಿದ್ದಾನೆ. ಆ.೧೪ರಂದು ದಿನೇಶ್ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಹೋದ್ಯೋಗಿ ಹಾಗೂ ಸಿಕ್ಕಿಂ ಮೂಲದ ಸ್ನೇಹಿತ ಪಾರ್ಟಿ ಕೊಡಿಸುವಂತೆ ಕೇಳಿದ್ದಾರೆ. ಹೀಗಾಗಿ ಆ.೧೫ರಂದು ರಾತ್ರಿ ೧೧.೩೦ರ ವರೆಗೆ ಕೆಲಸ ಮಾಡಿ ಬಳಿಕ ಮೂವರು ಬಾರ್‌ಗೆ ತೆರಳಿ ಮುಂಜಾನೆ ೨ ಗಂಟೆ ವರೆಗೆ ಪಾರ್ಟಿ ಮಾಡಿದ್ದಾರೆ. ಬಳಿಕ ಬಾರ್‌ನಿಂದ ಹೊರಗೆ ಬಂದು ಕೆಲ ಹೊತ್ತು ಮಾತನಾಡಿ ನಂತರ ಮೂವರು ತಮ್ಮ ಮನೆಗಳತ್ತ ಹೊರಟ್ಟಿದ್ದಾರೆ.
ಆಯ ಬಿದ್ದವ ಹಲ್ಲೆ ಎಂದು ಕಥೆ ಕಟ್ಟಿದ:
ದಿನೇಶ್ ಮುಂಜಾನೆ ೩ ಗಂಟೆ ಸುಮಾರಿಗೆ ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿ ಕಟ್ಟಡವೊಂದರ ಮೆಟ್ಟಿಲು ಹತ್ತಿದ್ದಾನೆ. ಈ ವೇಳೆ ಆಯ ತಪ್ಪಿ ಮೆಟ್ಟುಲುಗಳ ಮೇಲೆ ಬಿದ್ದಿದ್ದಾನೆ. ಈ ವೇಳೆ ಮುಖಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಆದರೆ, ಮದ್ಯದ ಅಮಲಿನಲ್ಲಿದ್ದ ದಿನೇಶ್ ಪೊಲೀಸರಿಗೆ ಹೇಳಿಕೆ ನೀಡುವಾಗ ಚೈನೀಸ್ ಎಂದು ಕಿಚಾಯಿಸಿ ಮೂವರು ಹಲ್ಲೆ ಮಾಡಿದರು ಎಂದು ತಪ್ಪು ಮಾಹಿತಿ ನೀಡಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ಆರೋಪಿ ನಡೆದು ಬಂದ ಮಾರ್ಗದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಸಿದಾಗ, ಮದ್ಯದ ಅಮಲಿನಲ್ಲಿ ದಿನೇಶ್ ಆಯ ತಪ್ಪಿ ಕಟ್ಟಡವೊಂದರ ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಗೊತ್ತಾಗಿದೆ. ಚೈನೀಸ್ ಎಂದು ಕಿಚಾಯಿಸಿ ಹಲ್ಲೆ ಮಾಡಿದ ಆರೋಪ ಸುಳ್ಳು ಎಂಬುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.