ಮಂಗಳೂರು: ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(DIET)ಗೆ ನುಗ್ಗಿದ ಯುವಕನೊಬ್ಬ ಅಲ್ಲಿನ ಮೂವರು ಸಿಬ್ಬಂದಿಗಳ ಮೇಲೆ ಮಚ್ಚಿನ ದಾಳಿ ಎಸಗಿದ್ದಾನೆ.
ಸೋಮವಾರ ಮಧ್ಯಾಹ್ನ ೧೨.೪೫ರ ಸುಮಾರಿಗೆ ಮಂಗಳೂರಿನ ಕಾರಾಗೃಹದ ಪಕ್ಕದ ಕಾಂಪೌಂಡ್‌ನಲ್ಲಿರುವ ಡಯಟ್ ಕಚೇರಿಗೆ ಬಂದ ಯುವಕ ಟೀಚರ್‌ವೊಬ್ಬರ ಹೆಸರು ತೆಗೆದು ಅವರಿದ್ದಾರೆಯೇ ಎಂದು ವಿಚಾರಿಸಿದ್ದಾನೆ. ಸಿಬ್ಬಂದಿಗಳಿಗೆ ಆ ಬಗ್ಗೆ ಮಾಹಿತಿ ಇರುವುದಿಲ್ಲ.
ಆಗ ಏಕಾಏಕಿ ತನ್ನಲ್ಲಿದ್ದ ಮಚ್ಚು ಹೊರತೆಗೆದು ಅಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಗ ಅಲ್ಲಿ ಮಹಿಳೆಯರ ಕಿರುಚಾಟ ಕೇಳಿ ಸಾರ್ವಜನಿಕರು, ಜೈಲಿನ ಸಿಬ್ಬಂದಿಗಳು ಓಡಿ ಬಂದಿದ್ದು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಯಾಕಾಗಿ ಆಗಿದೆ ಎನ್ನುವುದು ಸ್ಪಷ್ಟವಾಗಿಲ್ಲ, ಯುವಕನ ವಿಚಾರಣೆ ಬಳಿಕ ಗೊತ್ತಾಗಬಹುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಹಳೇ ವಿದ್ಯಾರ್ಥಿಗಳು, ತರಬೇತಿದಾರರು ಡಯಟ್ ಕಚೇರಿಗೆ ಬರುತ್ತಿರುತ್ತಾರೆ, ಹಾಗಾಗಿ ಬಂದವನ ಮೇಲೆ ಮಹಿಳೆಯರಿಗೆ ಹೆಚ್ಚಿನ ನಿಗಾ ಇರಲಿಲ್ಲ.
ರೀನಾ, ಗುಣವತಿ ಮತ್ತು ನಿರ್ಮಲ ಎಂಬ ಮೂವರು ಮಹಿಳೆಯರು ತಲೆ, ಕೈ ಬೆನ್ನು ಮುಂತಾದೆಡೆಗೆ ಕಡಿತದ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.