ನ್ಯೂಸ್

ನಾಳೆ ಕಲಬುರಗಿಯಲ್ಲಿ ಶಿಕ್ಷಕ ಸಾಹಿತಿಗಳ ಸಮಾವೇಶ

ಕಸಾಪ ಶಿಕ್ಷಕರ ಸಂಘ ಸಂಯುಕ್ತವಾಗಿ ಆಯೋಜನೆ | ಸಿಇಒ ಮೀನಾ ಉದ್ಘಾಟನೆ ಎಸ್ಪಿ ಕಿಶೋರಬಾಬು ಭಾಗಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸದಾ ಕಲಿಸುವ ಕಾಯಕದಲ್ಲಿ ತಲ್ಲೀನರಾಗಿರುವ ಶಿಕ್ಷಕರಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲು ಸೆ.೨೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಕನ್ನಡ ಭವನದಲ್ಲಿ  ಒಂದು ದಿನದ `ಶಿಕ್ಷಕ ಸಾಹಿತಿಗಳ ಸಮಾವೇಶ'ವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ ತಿಳಿಸಿದರು.
ಸಮಾವೇಶ ಯಶಸ್ವಿಗಾಗಿ ರಚಿಸಿದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಡಾ. ಸುರೇಶ ಸಜ್ಜನ್ ಹಾಗೂ ಕಾರ್ಯಾಧ್ಯಕ್ಷರಾಗಿ ಕಲ್ಯಾಣಕುಮಾರ ಶೀಲವಂತ ಅವರು ನೇಮಕ ಮಾಡಲಾಗಿದೆ. ವೇದಿಕೆಗೆ ಆದರ್ಶ ಶಿಕ್ಷಕಿ ಲಿಂ.ಸಿದ್ದಮ್ಮ ಶಿವಾನಂದ ಮಠಪತಿ ಹೆಸರು ಇಡಲಾಗಿದೆ  ಎಂದು ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಜಿಪಂ  ಸಿಇಒ ಭಂವರ್‌ಸಿAಗ್ ಮೀನಾ ಉದ್ಘಾಟಿಸುವರು. ಪ್ರೋಬೆಷನರಿ ಐಎಎಸ್ ಅಧಿಕಾರಿ ಗಜಾನನ ಬಾಲೆ ಅಧ್ಯಕ್ಷತೆ ವಹಿಸುವರು. ಪೊಲೀಸ್ ತರಬೇತಿ  ಮಹಾವಿದ್ಯಾಲಯ ಪ್ರಾಚಾರ್ಯರಾದ ಡಿ.ಕಿಶೋರಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ  ಇತರರು ಮುಖ್ಯ ಅತಿಥಿಗಳಾಗಿ  ಆಗಮಿಸಲಿದ್ದಾರೆ. ಜಿಲ್ಲೆಯ ಶಿಕ್ಷಕರೇ ರಚಿಸಿದ ಕವನಗಳ ಸಂಗ್ರಹ `ಅರಿವೇ ಗುರು' ಎಂಬ ಪ್ರಾತಿನಿಧಿಕ ಕವನ ಸಂಕಲನವನ್ನು ಬಿಡುಗಡೆ ಮಾಡಲಾಗುವುದು ಎಂದು ತೇಗಲತಿಪ್ಪಿ ವಿವರಿಸಿದರು.
ಮಧ್ಯಾಹ್ನ  ೧೨.೧೫ ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಶಿಕ್ಷಕರ ಕರ್ತವ್ಯಗಳು: ಪ್ರಸ್ತುತ ಸವಾಲುಗಳು ಕುರಿತು ಸಿಯುಕೆ  ಪ್ರಾಧ್ಯಾಪಕ ಡಾ.ವಿಕ್ರಮ್ ವಿಸಾಜಿ,  ತಹಸೀಲ್ದಾರ ಸುರೇಶ ವರ್ಮಾ ಮಾತನಾಡಲಿದ್ದು, ಶಾಲಾ ಶಿಕ್ಷಣ ಇಲಾಖೆ ವಿಶ್ರಾಂತ ಸಹ ನಿರ್ದೇಶಕ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೨ ಕ್ಕೆ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅಧ್ಯಕ್ಷತೆಯಲ್ಲಿ ಕಾವ್ಯ ಶಿಕ್ಷಣ ಹೆಸರಿನ ಶಿಕ್ಷಕರ ಕವಿಗೋಷ್ಠಿಯಲ್ಲಿ ಶಿಕ್ಷಕ ಕವಿಗಳಾದ ಕೆ.ಗಿರಿಮಲ್ಲ, ರಾಜಶೇಖರ ಮಾಂಗ್, ಪರ್ವಿನ್ ಸುಲ್ತಾನಾ, ಧರ್ಮಣ್ಣ  ಧನ್ನಿ, ರೇಣುಕಾ ಮಾಂಗ್ ಸೇರಿದಂತೆ ೨೫ಕ್ಕೂ ಶಿಕ್ಷಕರು  ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಸ್ವ ರಚಿತ ಕವನಗಳು ವಾಚಿಸಲಿದ್ದಾರೆ. ಉತ್ತರ ವಲಯದ ಬಿಇಒ ಸೋಮಶೇಖರ ಹಂಚಿನಾಳ, ಕಮಲಾಪುರ ತಾಪಂ ಇಒ ಅಂಬರೀಶ ಪಾಟೀಲ, ಸಾವಿತ್ರಿ ಪಾಟೀಲ ಉಪಸ್ಥಿತರಿರುವರು.
ಶಿಕ್ಷಕ ವೃತ್ತಿಯ ಜತೆಗೆ ಕನ್ನಡ ಸಾರಸ್ವತ ಲೋಕಕ್ಕೆ ಕೃತಿಗಳನ್ನು ಅರ್ಪಿಸಿ ವಿಶೇಷ ಕೊಡುಗೆ ಕೊಟ್ಟ ಜಿಲ್ಲೆಯ ೨೫ ಕ್ಕೂ ಹೆಚ್ಚು ಜನ ಆದರ್ಶ ಶಿಕ್ಷಕರನ್ನು ಸತ್ಕರಿಸಲಾಗುವುದು ಎಂದು ತೇಗಲತಿಪ್ಪಿ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯಶ್ವಂತರಾಯ ಅಷ್ಠಗಿ, ಜಮೀಲ್ ಇಮ್ರಾನ್ ಅಹ್ಮದ್, ರಾಮು ಚವ್ಹಾಣ, ನಾಗನ್ನಾಥ ಯಳಸಂಗಿ, ಮಲ್ಲಿಕಾರ್ಜುನ ಸಲಗರ, ವಿಲಾಸರಾವ ಸಿನ್ನೂರಕರ್ ಇತರರಿದ್ದರು.
-----