ಪಾಂಡವಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಎಂ.ಡಿ.ಕುಮಾರ ಅವರನ್ನು ನೇಮಕ ಮಾಡಿ ರಾಜ್ಯ ಸಮಿತಿ ಆದೇಶ ಹೊರಡಿಸಿದ್ದು, ಇದರಲ್ಲಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ತಿಳಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಪಿ.ಮಂಜುನಾಥ್ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಮಾ.24ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಮಿತಿ ಅಧ್ಯಕ್ಷರಾದ ಕೆ.ನಾಗೇಶ್ ಅವರು ಎಂ.ಡಿ.ಕುಮಾರ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮೇ 21 ರಂದು ಆದೇಶ ಹೊರಡಿಸಿದ್ದಾರೆ. ಸಂಘದ ನಿಯಮದ ಪ್ರಕಾರ ಎಂ.ಡಿ.ಕುಮಾರ್ ಅವರೇ ಅಧಿಕೃತ ಅಧ್ಯಕ್ಷರಾಗಿದ್ದಾರೆ. ಆದರೆ ಕೆಲವರು ತಾವೇ ಅಧ್ಯಕ್ಷರೆಂದು ಸ್ವಯಂ ಘೋಷಿಸಿಕೊಂಡು ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಂಘದ ಬೈಲಕ್ಕೆ ವಿರುದ್ಧವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘದ ಅಧ್ಯಕ್ಷ ಎಂ.ಡಿ.ಕುಮಾರ್ ಮಾತನಾಡಿ, ಸಂಘದ ರಾಜ್ಯ ಸಮಿತಿ ಮುಂದಿನ ಆದೇಶದವರೆಗೆ ನನ್ನನ್ನು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಸಂಘದ ಉಪಾಧ್ಯಕ್ಷರಾಗಿದ್ದ ಸುರೇಂದ್ರ ಅವರು ಕೆಲ ನಿರ್ದೇಶಕರನ್ನು ಕಟ್ಟಿಕೊಂಡು ಅಧ್ಯಕ್ಷರೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಸಂಘದ ಆಡಳಿತ ಮಂಡಳಿಯ ಅಧಿಕಾರಾವಧಿ ಇನ್ನೂ ಆರು ತಿಂಗಳ ಕಾಲ ಇದ್ದು, ಅಲ್ಲಿಯವರೆಗೆ ರಾಜ್ಯ ಸಮಿತಿಯ ಆದೇಶದಂತೆ ನಾವು ಮುಂದುವರಿಯಬೇಕಿದೆ. ಆನಂತರದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ಚುನಾವಣೆ ನಡೆದರೆ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಸಂಘದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೆಲವರ ವಿರುದ್ಧ ಜಿಲ್ಲಾ ಮತ್ತು ರಾಜ್ಯ ಸಮಿತಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಕೆ.ಸುಮಂಗಳಾ, ಸಹ ಕಾರ್ಯದರ್ಶಿ ಕೆ.ಮಂಜುಳಾ ಶಿಕ್ಷಕರಾದ ದೀಪು, ನಂದೀಶ, ಧರ್ಮೇಶ್, ರಾಘವೇಂದ್ರ, ಯೋಗೇಶ್, ಕೆ..ಎಸ್.ಸುರೇಂದ್ರ ಶಿವರಾಮು, ಎ.ವಿ.ಜಯರಾಮು, ಚನ್ನಕೇಶವ ಎಂ.ಎಸ್.ಶಿವರಾಮು, ಭಾಸ್ಕರ, ಕೆ.ಎಂ.ಮಹೇಶ್, ಪ್ರಬೀಶ್, ಲೋಕೇಶ್ ಇತರರು ಇದ್ದರು.