ನ್ಯೂಸ್

ಉದ್ಘಾಟನೆ ಬಳಿಕ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಮುದ್ರ ಪಾಲಾದ ಐಷಾರಾಮಿ ಹಡಗು! ವಿಡಿಯೋ ವೈರಲ್​... Luxury Ship

Luxury Ship : ಉತ್ತರ ಟರ್ಕಿಯ ಕರಾವಳಿಯಲ್ಲಿ ಹೊಸ ಐಷಾರಾಮಿ ಹಡಗೊಂದು ಮಗುಚಿ ಬಿದ್ದಿದೆ. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಅದು ಸಮುದ್ರ ಪಾಲಾಗಿದೆ. ಈ ವೇಳೆ ಹಡಗಿನ ಮಾಲೀಕರು ಸಮುದ್ರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ, ಈ ಐಷಾರಾಮಿ ಹಡಗನ್ನು 1 ಮಿಲಿಯನ್ ಡಾಲರ್​ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟರ್ಕಿಯ ಮೆಡ್ ಯಿಲ್ಮಾಜ್ ಶಿಪ್‌ಯಾರ್ಡ್‌ನಲ್ಲಿ ಮಂಗಳವಾರ ಹಡಗನ್ನು ಉದ್ಘಾಟಿಸಲಾಯಿತು. ಹಡಗು ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಹಡಗು ಪ್ರಯಾಣ ಪ್ರಾರಂಭವಾದ ಕೇವಲ 15 ನಿಮಿಷಗಳಲ್ಲೇ ಸಮುದ್ರದಲ್ಲಿ ಮುಳುಗಿತು.

ಹಡಗು ಮುಳುಗುವ ವೇಳೆ ಭಯಭೀತರಾದ ಪ್ರಯಾಣಿಕರು ಮತ್ತು ಸಿಬ್ಬಂದಿ, ತಕ್ಷಣವೇ ಸಮುದ್ರಕ್ಕೆ ಹಾರಿದರು. ನಂತರ, ಅವರು ಸುರಕ್ಷಿತವಾಗಿ ದಡಕ್ಕೆ ತಲುಪಿದರು. ಮಾಲೀಕರು ಮತ್ತು ಕ್ಯಾಪ್ಟನ್ ಕೂಡ ಸಮುದ್ರಕ್ಕೆ ಹಾರಿ ದಡ ತಲುಪಿದರು. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಈ ಹಡಗನ್ನು ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ ಟರ್ಕಿಯ ಮಾಲೀಕರಿಗೆ ತಲುಪಿಸಲಾಗಿದೆ. ಆದಾಗ್ಯೂ, ಈ ಹಡಗು ಇದ್ದಕ್ಕಿದ್ದಂತೆ ಮುಳುಗಲು ಕಾರಣ ಏನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಈಗಾಗಲೇ ತನಿಖೆಯನ್ನು ಆರಂಭಿಸಲಾಗಿದೆ.

ಇದರ ನಡುವೆ ಹಡಗು ಮುಳುಗುತ್ತಿರುವುದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ. ಇದು AI ವಿಡಿಯೋ ಎಂದು ನೀವು ಭಾವಿಸುತ್ತೀರಾ? ಎಂದು ಒಬ್ಬ ವ್ಯಕ್ತಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಅಂತಹ ದುಬಾರಿ ಹಡಗು ಹೇಗೆ ಮುಳುಗಿತು ಎಂದು ನೀವು ನನಗೆ ಹೇಳಬಲ್ಲಿರಾ? ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)