ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿ ಚಿನ್ನದ ವ್ಯಾಪಾರಿಗೆ 14 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಆರೋಪಿ ಐಶ್ವರ್ಯಾ ಗೌಡ ಬಳಿ ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರು ಪತ್ತೆಯಾಗಿವೆ.
ಪ್ರಕರಣ ಸಂಬಂಧ ಐಶ್ವರ್ಯಾ ಗೌಡಗೆ ಸೇರಿದ 2 ಮನೆಗಳ ಮೇಲೆ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು. ಬಿಎಂಡಬ್ಲ್ಯು, ಆಡಿ ಕಾರುಗಳು ಹಾಗೂ 29 ಕೆಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ವಂಚನೆ ಕೃತ್ಯಗಳು ಬಯಲಾದ ಬೆನ್ನಲ್ಲೇ ಎಚ್ಚೆತ್ತು ತನ್ನ ಮನೆಯಿಂದ ಆಕೆ ಬಂಗಾರದ ಒಡವೆಗಳನ್ನು ಸಾಗಿಸಿದ್ದಾಳೆ. ಹೀಗಾಗಿ 150 ಗ್ರಾಂ ಚಿನ್ನದ ಆಭರಣ ಸಿಕ್ಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಡಿ.ಕೆ. ಸುರೇಶ್ ಹೆಸರನ್ನು ಬಳಸಿಕೊಂಡು ಚಿನ್ನದ ವ್ಯಾಪಾರಿ ವನಿತಾ ಐತಾಳ್‌ರವರಿಗೆ 14 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯ ಗೌಡ ದಂಪತಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದರು. ಆರೋಪಿ ಮನೆ ಶೋಧನೆಗೆ ನಗರದ ಎಸಿಎಂಎಂ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಪೊಲೀಸರು, ರಾಜರಾಜೇಶ್ವರಿನಗರ ಮತ್ತು ತಲಘಟ್ಟಪುರದಲ್ಲಿರುವ ಐಶ್ವರ್ಯ ಗೌಡಗೆ ಸೇರಿದ 2 ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದರು.
ದೂರುದಾರರಿಗೆ ನೋಟಿಸ್
3.25 ಕೋಟಿ ರೂ. ಮತ್ತು 430 ಗ್ರಾಂ ಚಿನ್ನಾಭರಣ ವಂಚನೆ ಪ್ರಕರಣದ ದೂರುದಾರ ಶಿಲ್ಪಾ ಗೌಡಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ವಂಚನೆ ಕೃತ್ಯ ನಡೆದ ಸ್ಥಳ ತೋರಿಸಬೇಕು. ಸಾಕ್ಷಿದಾರರನ್ನು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಇನ್ನೆರಡು ದಿನದೊಳಗೆ ಆಗಮಿಸಿ ಹಾಜರುಪಡಿಸಬೇಕೆಂದು ಸೂಚಿಸಿದ್ದಾರೆ.