ಬೆಂಗಳೂರು: ಫೇಸ್ ಬುಕ್ ಜಾಹೀರಾತಿನ ಷೇರು ಮಾರ್ಕೆಟ್‌ನಲ್ಲಿ ಅಕೌಂಟೆಂಟ್ 3.14 ಕೋಟಿ ರೂ. ಹೂಡಿಕೆ ಮಾಡಿ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ರಾಜರಾಜೇಶ್ವರಿನಗರ ಬಿಇಎಂಎಲ್ ಲೇಔಟ್‌ನಲ್ಲಿ ನೆಲೆಸಿರುವ 54 ವರ್ಷದ ಅಕೌಂಟೆಂಟ್ ಮೋಸ ಹೋದವರು. ಇವರು ಕೊಟ್ಟ ದೂರಿನ ಮೇರೆಗೆ ಪಶ್ಚಿಮ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷ ಡಿ. 15ರಂದು ಅಕೌಂಟೆಂಟ್ ಫೇಸ್ ಬುಕ್ ಖಾತೆಯಲ್ಲಿ ಷೇರು ಮಾರ್ಕೆಟ್ ಬಗ್ಗೆ ಸಂದೇಶ ಬಂದಿರುವುದು ಗಮನಿಸಿ ಕ್ಲಿಕ್ ಮಾಡಿದ್ದರು. ತಕ್ಷಣ ಏಳು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಇವರ ಮೊಬೈಲ್ ನಂಬರ್‌ಗೆ ಸೇರ್ಪಡೆಯಾಗಿತ್ತು. ಕೆಲ ದಿನಗಳ ಕಾಲ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೆ ಮಾಡಿ ಅರಿವು ಮೂಡಿಸಲಾಗಿತ್ತು. ಇದಾದ ಮೇಲೆ 7 ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಲಹೆ ಕೊಡಲಾಗಿತ್ತು. ಅದರಂತೆ ಆ್ಯಪ್‌ಗಳನ್ನು ಅಕೌಂಡೆಂಟ್ ಡೌನ್‌ಲೋಡ್ ಮಾಡಿಕೊಂಡು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿ ಅಕೌಂಟ್ ತೆರೆದು ಅದರಲ್ಲಿ 20 ಸಾವಿರ ರೂ. ಹೂಡಿಕೆ ಮಾಡಿದ್ದರು. ಸ್ವಲ್ಪ ದಿನಕ್ಕೆ ಇವರ ಖಾತೆಗೆ ಲಾಭಾಂಶವೆಂದು 50 ಸಾವಿರ ರೂ. ಜಮೆಯಾಗಿತ್ತು.
ಬಳಿಕ ಎಲ್ಲ ಆ್ಯಪ್‌ಗಳಲ್ಲಿ ಖಾತೆ ತೆರೆದು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬಂದಿರುವುದಾಗಿ ಆಮಿಷವೊಡ್ಡಿದ್ದರು. ಹಂತ ಹಂತವಾಗಿ 3.14 ಕೋಟಿ ರೂ. ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಆ್ಯಪ್‌ನಲ್ಲಿ ತೆರೆದಿರುವ ಖಾತೆಯಲ್ಲಿ ಲಾಭಾಂಶ ಮಾತ್ರ ತೋರಿಸಿದ್ದರು. ಅದನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲು ಅಕೌಂಟೆಂಟ್ ಪ್ರಯತ್ನ ಮಾಡಿದಾಗ ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ವಿತ್ ಡ್ರಾ ಕೂಡ ಸಾಧ್ಯವಾಗಲಿಲ್ಲ. ಇದನ್ನು ಪ್ರಶ್ನಿಸಿದಾಗ ಮತ್ತೆ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ವಿತ್‌ಡ್ರಾ ಸಾಧ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಅಕೌಂಟೆಂಡ್, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.