ಭೋಪಾಲ್: ಹೆಚ್ಚಿನ ಕಮಿಷನ್ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರ ನಡೆಸುವುದಾಗಿ ಅಡುಗೆ ಅನಿಲ ವಿತರಕರ ಸಂಘ ಭಾನುವಾರ ಎಚ್ಚರಿಕೆ ನೀಡಿದೆ. ಶನಿವಾರ ಇಲ್ಲಿ ನಡೆದ ಸಂಘದ ರಾಷ್ಟ್ರೀಯ ಸಮಾವೇಶದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ರಾಜ್ಯ ಘಟಕಗಳು ತಮ್ಮ ಬೇಡಿಕೆಯನ್ನು ಮಂಡಿಸಿವೆ. ಇದರೊಂದಿಗೆ ಇತರ ಬೇಡಿಕೆಗಳನ್ನೂ ಸೇರಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಈಗ ನೀಡುತ್ತಿರುವ ಕಮಿಷನ್ ತೀರಾ ಕಡಿಮೆಯಾಗಿದ್ದು, ಕಾರ್ಯಾಚರಣೆ ವೆಚ್ಚಕ್ಕೂ ಅದು ಸಾಲುವುದಿಲ್ಲ. ಅದನ್ನು ಕನಿಷ್ಠ 150 ರೂ.ಗೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಪಿಜಿ ಪೂರೈಕೆಯು ಸದಾ ಬೇಡಿಕೆಯ ಪ್ರಮಾಣವನ್ನು ಆಧರಿಸಿರುತ್ತದೆ. ಆದರೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ಗೃಹೇತರ ಬಳಕೆಯ ಸಿಲಿಂಡರ್ಗಳನ್ನು ತೈಲ ಕಂಪನಿಗಳು ಒತ್ತಾಯಪೂರ್ವಕವಾಗಿ ನೀಡುತ್ತಿವೆ. ಇದನ್ನು ತಕ್ಷಣ ನಿಲ್ಲಿಸಬೇಕು. ಇದಲ್ಲದೆ ಉಜ್ವಲ ಯೋಜನೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿಯೂ ಸಮಸ್ಯೆಗಳಿವೆ ಎಂದು ವಿವರಿಸಿದ್ದಾರೆ.