Bangalore Cylinder Blast: ಪೂರ್ವ ಬೆಂಗಳೂರಿನ ಕಗ್ಗದಾಸಪುರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಶಾಲೆಯ ಬಳಿಯೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಳಗಿನ ಜಾವ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ 6ನೇ ಕ್ರಾಸ್‌ನ ಖಾಲಿ ನಿವೇಶನದಲ್ಲಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಸ್ಫೋಟ ಸಂಭವಿಸಿದೆ. ಕಾರ್ಮಿಕರ ಗುಡಿಸಲುಗಳಿಗೆ ಪೂರೈಸಲು ಕಾಂಟ್ರಾಕ್ಟರ್ ಒಬ್ಬರು ಕಳೆದ ಎರಡು ದಿನಗಳಿಂದ ಇಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿದ್ದರು. ಶೆಡ್‌ನಲ್ಲಿ ಸುಮಾರು 50 ವಾಣಿಜ್ಯ, ಗೃಹಬಳಕೆಯ ಹಾಗೂ ಮಿನಿ ಸಿಲಿಂಡರ್‌ಗಳಿದ್ದವು. ಇದೇ ಜಾಗದಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡಲಾಗುತ್ತಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಿನ ಜಾವ ಶೆಡ್‌ನಲ್ಲಿದ್ದ ಮೂರು ಎಲ್‌ಪಿಜಿ ಸಿಲಿಂಡರ್‌ಗಳು ಒಂದರ ಹಿಂದೆ ಒಂದರಂತೆ ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಶೆಡ್ ಸಂಪೂರ್ಣ ಧ್ವಂಸವಾಗಿದ್ದು, ಪಕ್ಕದಲ್ಲಿದ್ದ ಎನ್‌ಸಿಎಫ್‌ಇ ಶಾಲೆಯ ಕೆಲವು ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಸ್ಫೋಟದ ಭಾರೀ ಶಬ್ದಕ್ಕೆ ಸ್ಥಳೀಯರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂಕಗೊಂಡಿದ್ದರು.
ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರ ಬಗ್ಗೆ ಹಾಗೂ ರಿಫಿಲ್ಲಿಂಗ್ ನಡೆಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.