ಮಧ್ಯಪ್ರಾಚ್ಯ ಹಾಗೂ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ  
ನ್ಯೂಸ್

Cyclone Warning: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅಕ್ಟೋಬರ್ 26ಕ್ಕೆ ಚಂಡಮಾರುತದ ಭೀತಿ, ಆಂಧ್ರ-ಒಡಿಶಾ ಕರಾವಳಿಗೆ ಹೈ ಅಲರ್ಟ್!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅಕ್ಟೋಬರ್ 26ರೊಳಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದ್ದು, ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ.

- ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ

- ಅಕ್ಟೋಬರ್ 26ರೊಳಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ

- ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ ಕರಾವಳಿಯತ್ತ ಸಾಗಲಿರುವ ಚಂಡಮಾರುತ

- ಅಕ್ಟೋಬರ್ 23ರಿಂದ 28ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

Bay of Bengal Low Pressure: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಆತಂಕ ಮೂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿಯ ಪ್ರಕಾರ, ಪೂರ್ವ ಮಧ್ಯ ಮತ್ತು ಅದಕ್ಕೆ ಹತ್ತಿರದ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ

ಅಕ್ಟೋಬರ್ 24ರಂದು ಇದು ವಾಯುಭಾರ ಕುಸಿತವಾಗಿ (Depression), ಅಕ್ಟೋಬರ್ 25ರ ವೇಳೆಗೆ ಆಳವಾದ ವಾಯುಭಾರ ಕುಸಿತವಾಗಿ (Deep Depression) ಬದಲಾಗಲಿದೆ. ನಂತರ ಅಕ್ಟೋಬರ್ 26ರ ಮುಂಜಾನೆಯ ವೇಳೆಗೆ ಇದು ಪ್ರಬಲ ಚಂಡಮಾರುತವಾಗಿ (Cyclonic Storm) ತೀವ್ರಗೊಳ್ಳಲಿದ್ದು, ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗಿ ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.

ಗಾಳಿಯ ಅಬ್ಬರ ಮತ್ತು ಸಮುದ್ರದಲ್ಲಿ ಆತಂಕದ ಪರಿಸ್ಥಿತಿ

ಚಂಡಮಾರುತದ ಪ್ರಭಾವದಿಂದಾಗಿ ಸಮುದ್ರದಲ್ಲಿ ಭಾರೀ ಗಾಳಿ ಬೀಸಲಿದೆ. ಗಾಳಿಯ ವೇಗವು ಗಂಟೆಗೆ 35-45 ಕಿ.ಮೀ ಇಂದ ಆರಂಭವಾಗಿ ಕ್ರಮೇಣ ಗಂಟೆಗೆ 70 ರಿಂದ 90 ಕಿ.ಮೀ ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಈ ವೇಳೆ ಸಮುದ್ರ ಅತ್ಯಂತ ಪ್ರಕ್ಷುಬ್ಧವಾಗಿರಲಿದ್ದು, ಬೃಹತ್ ಅಲೆಗಳು ಏಳಲಿವೆ.

ಮೀನುಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ

ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ಮತ್ತು ನಾವಿಕರು ಅಕ್ಟೋಬರ್ 23ರಿಂದ ಅಕ್ಟೋಬರ್ 28ರವರೆಗೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕರಾವಳಿ ಭಾಗದ ಬಂದರುಗಳಲ್ಲೂ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. (ಏಜೆನ್ಸೀಸ್​)