ವಿಜಯವಾಡ: ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಾಗರ್ ಕರ್ನೂಲ್ ಜಿಲ್ಲೆಯ ಬಾಲ್ಮೂರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಬಾಲ್ಮೂರ್ ವಲಯದ ಬಿಲ್ಲಕಲ್ಲು ಗ್ರಾಮದ ಅಖಿಲಾ (19) ಮತ್ತು ಅದೇ ವಲಯದ ಚೆಂಚುಗುಡೆಮ್ ಗ್ರಾಮದ ನಿಮ್ಮಲಾ ಅನಿಲ್ (20) ಎಂದು ಗುರುತಿಸಲಾಗಿದೆ. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮಗಳ ಪ್ರೀತಿಯ ವಿಚಾರ ತಿಳಿದ ಅಖಿಲಾ ಪಾಲಕರು ಆಕೆಯನ್ನು ಬೈದು ಮದುವೆಗೆ ನಿರಾಕರಿಸಿದ್ದರು. ಬಳಿಕ ಅಖಿಲಾ ತನ್ನ ಬಾಯ್ಫ್ರೆಂಡ್ ಅನಿಲ್ಗೆ ವಿಚಾರ ಮುಟ್ಟಿಸಿದ್ದಳು. ಅನಿಲ್ ಭಾನುವಾರ ರಾತ್ರಿ ಬಿಲ್ಲಕಲ್ಲುಗೆ ಆಗಮಿಸಿ, ಅಖಲಾಳನ್ನು ಕರೆದೊಯ್ದಿದ್ದ.
ಬಳಿಕ ಸೋಮವಾರ ಬೆಳಗ್ಗೆ 4.40ರ ಸುಮಾರಿಗೆ ಅನಿಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಬಳಿಕ ಸ್ನೇಹಿತ, ಇತರರ ಜತೆಗೂಡಿ ಅರಣ್ಯ ಪ್ರದೇಶವನ್ನು ಹುಡುಕಾಡಿದ್ದಾರೆ. ಆದರೆ, ಪ್ರೇಮಿಗಳು ಪತ್ತೆಯಾಗಲಿಲ್ಲ. ಸೋಮವಾರ ಬೆಳಗ್ಗೆ ದನಗಾಹಿಗಳ ಕಣ್ಣಿಗೆ ಪ್ರೇಮಿಗಳ ಶವ ಪತ್ತೆಯಾಗಿದೆ.
ಬಿಲ್ಲಕಲ್ಲುದ ರಷ್ಯನ್ ಪಾಂಡ್ ಫಾರೆಸ್ಟ್ ಡಿಪಾರ್ಟ್ಮೆಂಟ್ ಬೇಸ್ ಕ್ಯಾಮ್ ಹಿಂಭಾಗದ ಮರವೊಂದರಲ್ಲಿ ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ದನಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. (ಏಜೆನ್ಸೀಸ್)