- ಶುದ್ಧ ಕನ್ನಡ ಮಾತನಾಡುವವರನ್ನು ಆದರ್ಶವಾಗಿ ತೆಗೆದುಕೊಳ್ಳಿ
- ಭಾಷೆಯ ಹೊಸ ಹೊಸ ಪದಗಳನ್ನು ಪ್ರಯೋಗಿಸಿ
- ಶಬ್ದಗಳ ಉಚ್ಚರದ ಜ್ಞಾನ ಎಲ್ಲರಿಗೂ ಅವಶ್ಯ.
ವಿ. ಮನೋಹರ್, ಸಂಗೀತ ನಿರ್ದೇಶಕ
ಶುದ್ಧ ಕನ್ನಡ ಮಾತನಾಡುವವರನ್ನು ಆದರ್ಶವಾಗಿ ತೆಗೆದುಕೊಂಡಾಗ ಮಾತ್ರ ಸ್ವಚ್ಛ ಕನ್ನಡ ಮಾತನಾಡಲು ಸಾಧ್ಯ. ಭಾಷೆಯ ಹೊಸ ಹೊಸ ಪದಗಳನ್ನು ಪ್ರಯೋಗಿಸುವುದು ಕೂಡ ಒಳ್ಳೆಯ ಸಂಗತಿ. ಪ್ರಸ್ತುತ ಸಾಕಷ್ಟು ಕನ್ನಡ ಪದಗಳೇ ಬಳಕೆಯಲ್ಲಿ ಇಲ್ಲದಂತಾಗಿದೆ. ಉದಾಹರಣೆಗೆ ‘ಹೊರಗೆ’ ಎಂಬ ಪದ ಬಳಕೆ ಮಾಡುವುದು ಕಡಿಮೆಯಾಗಿದೆ. ‘ಹೊರಗೆ’ ಬದಲು, ಆಚೆ-ಈಚೆ ಎಂದೇ ಹೆಚ್ಚು ಬಳಕೆಯಾಗುತ್ತದೆ. ಆಯಾ ಸಂದರ್ಭ ತಕ್ಕಂತೆ ಆ ಪದವೇ ಬಳಸದೇ ಹೋದರೆ ಅದು ಮತ್ತೆ ಬಳಕೆಗೆ ಬರುವುದಿಲ್ಲ. ಇನ್ನು ಕನ್ನಡದ ಪದಗಳ ಉಚ್ಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಗಮನಹರಿಸಬೇಕು. ಶಿಕ್ಷಕರು ಸೇರಿ ಹಲವರು ಕನ್ನಡದ ಅನುನಾಸಿಕ ಪದಗಳನ್ನೇ ಸರಿಯಾಗಿ ಉಚ್ಚರಿಸುವುದಿಲ್ಲ. ಶಬ್ದಗಳ ಉಚ್ಚರದ ಜ್ಞಾನ ಎಲ್ಲರಿಗೂ ಅವಶ್ಯ. ಇನ್ನು ಇಂದಿನ ಯುವಕರಿಗೆ ಭಾಷೆಯ ಕುರಿತಂತೆ ಸಂಸ್ಕಾರ ಬೆಳೆಸಬೇಕು. ಇದು ಮನೆ ಹಾಗೂ ಶಾಲೆಯಿಂದಲೇ ಆರಂಭವಾಗಬೇಕು.
ಭಾಷೆಗೆ ಇರುವ ಅಭಿಮಾನ ನಮ್ಮ ನಾಡು, ಊರು, ಪರಿಸರದ ಮೇಲೆಯೂ ಇರಬೇಕು. ನಾಡು ಇದ್ದರೆ ಮಾತ್ರ ಭಾಷೆ ಇರುತ್ತದೆ. ಹಾಗಾಗಿ, ನಮ್ಮ ನಾಡಿನ ರಕ್ಷಣೆಯಾಗಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬರೀ ಮಾತಷ್ಟೇ ಆಗದೆ ಪರಿಸರವನ್ನು ಪ್ರೀತಿಸಬೇಕು. ಹಾಗೆಯೇ ನೆಲ-ಜಲದ ಬಗ್ಗೆ ಅಪಾರ ಅಭಿಮಾನ ಹೊಂದಬೇಕು. ಬೂಟಾಟಿಕೆ ಬಿಟ್ಟು ನೀರಿನ ಸರಿಯಾದ ಬಳಕೆ ಮಾಡಿ, ಮಾಲಿನ್ಯವನ್ನು ತಡೆಯಬೇಕು. ನೆಲ-ಜಲ, ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ನಾಡಿನ ಜನರು ಆರೋಗ್ಯದಿಂದ ಇರುತ್ತಾರೆ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು, ಗೌರವದಿಂದ ಮಾತನಾಡಬೇಕು. ನಾವು ಎಷ್ಟು ಮಾತನಾಡುತ್ತೇವೆಯೋ ಬೇರೆಯವರು ಕೂಡ ನಮ್ಮ ಭಾಷೆಯತ್ತ ಆಕರ್ಷಿತರಾಗುತ್ತಾರೆ. ಇಂದಿನ ಯುವಜನತೆ ಜವಾಬ್ದಾರಿ ಅರಿತು ನಾಡಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.