ನ್ಯೂಸ್

ಶ್ರೀಮಂತ ವರನನ್ನು ಬಲೆಗೆ ಬೀಳಿಸಿಕೊಳ್ಳಲು 'ಪ್ರೇಮ ಪಾಠ': ಈ ಟೀಚರ್​ ವರಮಾನ 163 ಕೋಟಿ!

ಬೀಜಿಂಗ್​: ಶ್ರೀಮಂತ ವರನನ್ನು ಒಲಿಸಿಕೊಂಡು ಬಿಂದಾಸ್​ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಮಹಿಳೆಯರಿಗೆ ಪಾಠ ಹೇಳಿಕೊಡುವ ಚೀನಾದ ವಿವಾದಾತ್ಮಕ "ಪ್ರೇಮ ಗುರು" ಚುವಾಂಕು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈಕೆಯ ವರಮಾನ ವಾರ್ಷಿಕವಾಗಿ 163 ಕೋಟಿ ರೂಪಾಯಿ ಮೀರಿದೆ ಎಂದು ಚೀನಾ ಮಾಧ್ಯಮ ವರದಿಮಾಡಿದೆ.

ಸಂಬಂಧ ಮತ್ತು ಆರ್ಥಿಕ ಸಲಹೆಗಳನ್ನು ನೀಡುವ ಮೂಲಕ ಚುವಾಂಕು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಆಕೆ ಲಕ್ಷಾಂತರ ಫಾಲೋವರ್ಸ್ ಗಳನ್ನು ಆಕರ್ಷಿಸುತ್ತಿದ್ದಾರೆ.

ಚುವಾಂಕು ಪವಿತ್ರವಾದ ಮದುವೆ ಬಂಧ ಮತ್ತು ಸಂಬಂಧಗಳನ್ನು ಹಣಕಾಸಿನ ಅವಕಾಶಗಳನ್ನಾಗಿ ನೋಡುವ, ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಈ ಸಂಪರ್ಕಗಳನ್ನು ಮಹಿಳೆಯರಿಗೆ ಕಲಿಸುವುದು ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಇಂತಹ ಸಂಬಂಧಗಳು ಅನೈತಿಕವೆಂದು ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಚುವಾಂಕು ಹೇಳುವುದೇ ಬೇರೆ. ನನ್ನ ವೀಡಿಯೋಗಳಲ್ಲಿನ ಪಾಠಗಳು ಮಹಿಳೆಯರು ಉತ್ತಮ ಸಂಬಂಧಗಳನ್ನು ಹೊಂದಲು ಕಾರಣವಾಗಿದೆ. ಅವು ಲಾಭದಾಯಕವಾಗಿವೆ. ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಿವೆ. ಅವರನ್ನು ಸಬಲೀಕರಣಗೊಳಿಸಲು ಸಹಕಾರಿಯಾಗಿವೆ ಎಂದು ಹೇಳುತ್ತಾಳೆ.

ಇನ್ನು ಈ ಚುವಾಂಕು ತನ್ನ ಲೈವ್ ಸ್ಟ್ರೀಮ್‌ಗಳಲ್ಲಿ ಒಂದು ಸಲಹೆಗಾಗಿ 12,945 ರೂ. ಪಡೆದುಕೊಳ್ಳುತ್ತಾಳೆ. ಆಕೆಯ ಜನಪ್ರಿಯ ಕೋರ್ಸ್, "ಮೌಲ್ಯಯುತ ಸಂಬಂಧಗಳು"ಗೆ 43,179 ರೂ., ವೈಯಕ್ತಿಕ ಸಮಾಲೋಚನೆಗಾಗಿ ತಿಂಗಳಿಗೆ 1,16,927 ರೂ., ಪಡೆದುಕೊಳ್ಳುತ್ತಾಳೆ. ಆಕೆ ಡೇಟಿಂಗ್ ತಂತ್ರಗಳ ಕುರಿತು ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಾಳೆ. ಆಕೆಯ ಸಲಹೆಗಳು ವಿವಾದಾತ್ಮಕ ಎನಿಸಿದ್ದರೂ ಬೇಡಿಕೆಯಲ್ಲಿದ್ದು, ಸಾಕಷ್ಟು ಹಣ ಗಳಿಸುತ್ತಿದ್ದಾಳೆ.

ಜನರ ವಿರೋಧ ಬರುತ್ತಿದ್ದಂತೆ ಆಕೆಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೈಬೋ ನಿಷೇಧಿಸಲಾಗಿದೆ. ಆದರೆ ಆಕೆ ತನ್ನ ವ್ಯವಹಾರ ಮುಂದುವರಿಸಲು ಎಐ ತಂತ್ರಜ್ಞಾನ, ಗ್ರಾಹಕರ ನೇರ ಸಂವಹನ ಮತ್ತು ವೈಯಕ್ತಿಕ ಚಾನಲ್‌ಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ತಲುಪುತ್ತಿದ್ದಾರೆ. ಇದರಲ್ಲೂ ಆಕೆ ಗಮನಾರ್ಹ ಪ್ರಭಾವ ಮತ್ತು ಆದಾಯವನ್ನು ಗಳಿಸುತ್ತಿದ್ದಾಳೆ.