ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಯಶಸ್ವಿಯಾಗಿ ಮೊದಲ ವಾರ ಪೂರೈಸಿ, ಎರಡನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡಿಗರೇ ನಿರ್ವಿುಸಿರುವ, ಕನ್ನಡದ ಸಾಧಕನ ಕುರಿತ ಮೊದಲ ಬಯೋಪಿಕ್ಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಹೆಸರಾಂತ ರಾಜಕಾರಣಿಗಳು, ಮಠಾಧೀಶರು, ಉದ್ಯಮಿಗಳು, ಸೆಲೆಬ್ರಿಟಿಗಳಿಂದ ಹಿಡಿದು, ಕಾಲೇಜು, ಶಾಲೆಗಳ ವಿದ್ಯಾರ್ಥಿಗಳವರೆಗೂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ನಿಹಾಲ್, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ ಸೇರಿದಂತೆ ಎಲ್ಲರ ನಟನೆಗೂ ಉತ್ತಮ ಮಾತುಗಳು ಕೇಳಿಬರುತ್ತಿವೆ. ಹಾಗಂತ ಚಿತ್ರದ ತಾರಾಗಣ ಇಷ್ಟಕ್ಕೇ ಸೀಮಿತವಾಗಿಲ್ಲ. ಇನ್ನೂ ಹಲ ವಾರು ಪಾತ್ರಗಳು ಚಿತ್ರದಲ್ಲಿವೆ. ಎಲ್ಲ ಪಾತ್ರಗಳಿಗೂ ಅವುಗಳದೇ ಆದ ಪ್ರಾಮುಖ್ಯತೆಯಿದೆ. ಅಂತಹ ಕೆಲವು ಪಾತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಮೇಶ್ ಭಟ್
ಹೆಸರಾಂತ ಪೋಷಕ ನಟ ರಮೇಶ್ ಭಟ್ ‘ವಿಜಯಾನಂದ’ ಚಿತ್ರದಲ್ಲಿ ನಟೇಶ್ ಮೂರ್ತಿ ಎಂಬ ಹಿರಿಯ ಪತ್ರ ಕರ್ತರಾಗಿ ಕಾಣಿಸಿಕೊಂಡಿದ್ದಾರೆ. ತುಮ ಕೂರಿನಲ್ಲಿ ಸ್ಥಳೀಯ ಪತ್ರಿಕೆ ನಡೆಸುವ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿಯಾಗಿ ಗಮನ ಸೆಳೆಯುತ್ತಾರೆ. ನಟೇಶ್ ಮೂರ್ತಿ ಮತ್ತು ಡಾ. ಆನಂದ ಸಂಕೇಶ್ವರ ಪಾತ್ರಗಳ ನಡುವಿನ ಸನ್ನಿವೇಶಗಳು ಚಿತ್ರದ ಹೈಲೈಟ್ಗಳಲ್ಲೊಂದು.
ಅರುಣಾ ಬಾಲರಾಜ್
ಹಿರಿಯ ಪತ್ರಕರ್ತ ನಟೇಶ್ ಮೂರ್ತಿ ಪತ್ನಿ ಸರೋಜಾ ಪಾತ್ರದಲ್ಲಿ ಅರುಣಾ ಬಾಲರಾಜ್ ನಟಿಸಿದ್ದಾರೆ. ಪತ್ರಿಕೆ ನಡೆಸಲು ಪತಿ ಕಷ್ಟಪಡುವುದನ್ನು ನೋಡಿ, ಆತನ ಮನವೊಲಿಸಲು ಯತ್ನಿಸುವ ಸೀನ್ನಲ್ಲಿ ಅವರು ಗಮನ ಸೆಳೆಯುತ್ತಾರೆ.
ಉಮೇಶ್ ಬಣಕಾರ್
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಈ ಚಿತ್ರದಲ್ಲಿ ದೇಸಾಯಿ ಎಂಬ ಗದಗ ಮಾರುಕಟ್ಟೆಯ ಮುಖಂಡನ ಪಾತ್ರದಲ್ಲಿ ನಟಿಸಿದ್ದಾರೆ. ಮಾರುಕಟ್ಟೆಯ ದೈನಂದಿನ ಸಮಸ್ಯೆಗಳನ್ನು ಬಗೆಹರಿಸುವ, ನ್ಯಾಯದ ಪರ ನಿಲ್ಲುವ, ಜತೆಗೆ ತನಗೂ ನಷ್ಟ ಮಾಡಿಕೊಳ್ಳದ ಚಾಲಾಕಿ ವ್ಯಕ್ತಿಯ ಪಾತ್ರ ಅವರದು.
ಚಿಂದೋಡಿ ವಿಜಯಕುಮಾರ
ಹೆಸರಾಂತ ರಂಗಭೂಮಿ ಕಲಾವಿದ ಚಿಂದೋಡಿ ವಿಜಯ ಕುಮಾರ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಹಿರಿಯ ಸಹೋದರ ದಯಾನಂದ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ.
ಲಕ್ಷ್ಮೀ ಸಿದ್ದಯ್ಯ
ಹಲವು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮೀ ಸಿದ್ದಯ್ಯ ‘ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಅಣ್ಣ ದಯಾನಂದ ಸಂಕೇಶ್ವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.
ಆರ್ಜೆ ವಿಕ್ಕಿ
ಖ್ಯಾತ ಆರ್ಜೆ ವಿಕ್ಕಿ ಕೂಡ ‘ವಿಜಯಾನಂದ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಡಾ. ವಿಜಯ ಸಂಕೇಶ್ವರರ ಬಾಲ್ಯದ ಗೆಳೆಯ ಕುಮಾರ್ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ವಿಶೇಷ ಅಂದರೆ ಹೊಸ ಉದ್ಯಮಕ್ಕೆ ಕಾಲಿಡುವ ಯುವಕ ವಿಜಯಗೆ ಬೆಂಬಲವಾಗಿ ನಿಲ್ಲುವ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಣೇಶ್ ರಾವ್
ಹೋರಾಟಗಾರ ಸಂಪತ್ ಕಟ್ಟಿಮನಿ ಪಾತ್ರದಲ್ಲಿ ಗಣೇಶ್ ರಾವ್ ಕಾಣಿಸಿಕೊಂಡಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರು ಉದ್ಯಮ ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಅವರಿಗೆ ಕಠಿಣ ಸವಾಲು ಒಡ್ಡುವ ಪ್ರತಿಭಟನಾಕಾರನ ಪಾತ್ರದಲ್ಲಿ ಇವರು ನಟಿಸಿದ್ದಾರೆ.
ಶಂಕರ್ ಭಟ್
ಮುಂಬೈನ ಪುಸ್ತಕ ಮಳಿಗೆ ಮಾಲೀಕ ರತನ್ ಸೇಠ್ ಪಾತ್ರದಲ್ಲಿ ಶಂಕರ್ ಭಟ್ ನಟಿಸಿದ್ದಾರೆ. ಯುವಕ ವಿಜಯ ಸಂಕೇಶ್ವರ ತಮ್ಮ ಪ್ರಿಂಟಿಂಗ್ ಪ್ರೆಸ್ನಿಂದ ಮುದ್ರಣ ವಾದ ಪುಸ್ತಕಗಳನ್ನು ಮುಂಬೈಗೆ ಹೋಗಿ ಮಾರಾಟ ಮಾಡುತ್ತಿದ್ದ ದಿನಗಳಲ್ಲಿ ರತನ್ ಸೇಠ್ ಪಾತ್ರ ಬರುತ್ತದೆ.
ಡಾ. ವಿಜಯ ಸಂಕೇಶ್ವರ ಅವರ ಸಹೋದರ ಉಮೇಶ ಸಂಕೇಶ್ವರ ಪಾತ್ರದಲ್ಲಿ ಪ್ರಸಾದ್ ವಸಿಷ್ಠ, ರಮಾ ಪಾತ್ರದಲ್ಲಿ ಶರಣ್ಯಾ, ಹೊಸರಜ್ಜಿ ಪಾತ್ರದಲ್ಲಿ ಹಿರಿಯ ನಟಿ ವಿಜಯಲಕ್ಷ್ಮೀ, ಸುವರ್ಣ ಪಾತ್ರದಲ್ಲಿ ರಘು ರಾಮನಕೊಪ್ಪ, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಯಶವಂತ ಸರದೇಶಪಾಂಡೆ, ಮತ್ತು ಕಲ್ಮೇಶ್ ಪಾತ್ರದಲ್ಲಿ ಅಜಯ್ ರಾಜ್ ನಟಿಸಿದ್ದಾರೆ.
‘ನಾನು ಬೆಟ್ಟ ಹತ್ತುವುದು ಜನ ನನ್ನನ್ನು ನೋಡಲೆಂದಲ್ಲ, ನಾನು ಜಗತ್ತನ್ನು ನೋಡಲು. ಈಜುವುದಾದರೆ ಸಮುದ್ರದಲ್ಲಿ ಈಜಬೇಕು ಎಂಬ ಧ್ಯೇಯವನ್ನು ಇಟ್ಟುಕೊಂಡು ವಿಆರ್ಎಲ್ ಸಮೂಹ ಸಂಸ್ಥೆ ಸ್ಥಾಪನೆಗೆ ಕಾರಣರಾದ ಡಾ. ವಿಜಯ ಸಂಕೇಶ್ವರ ಅವರು ನಮಗೆ ಲಾಜಿಸ್ಟಿಕ್ ಕಿಂಗ್ ಆಗಿ ಕಾಣುತ್ತಾರೆ. ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ಹೊಸ ಉದ್ಯಮ ಸ್ಥಾಪನೆ ಮಾಡುವವರಿಗೆ ಸ್ಪೂರ್ತಿದಾಯಕವಾಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ ಶ್ರೇಯಸ್ಸು ಅವರದು. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲಿಯೂ ಬೇಸರವಾಗದೆ ಕೊನೆತನಕ ನಮ್ಮನ್ನು ಸೆಳೆಯುತ್ತದೆ’
| ಪ್ರಕಾಶ್ ಪ್ರಭು ಉದ್ಯಮಿ ಶಿವಮೊಗ್ಗ
‘ಒಬ್ಬ ಸಾಮಾನ್ಯ ವ್ಯಕ್ತಿ ಶಕ್ತಿಯಾಗಿ, ಒಂದು ದೊಡ್ಡ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ನಿಂತು ಸಾವಿರಾರು ಜನರಿಗೆ ಉದ್ಯೋಗ ನೀಡುವಲ್ಲಿ, ಬದುಕು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಒಬ್ಬ ಮಹಾನ್ ಚೇತನ, ಜೀವಂತ ದಂತಕಥೆಯಾಗಿರುವ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಲನಚಿತ್ರ ಕೇವಲ ಒಂದು ಸಿನಿಮಾ ಆಗಿರದೇ ಲಕ್ಷಾಂತರ ಮಂದಿಯ ಜೀವನೋತ್ಸಾಹಕ್ಕೆ ಪ್ರೇರಕ ಶಕ್ತಿಯಾಗಿ ಮೂಡಿಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಕೇವಲ ಒಂದು ಟ್ರಕ್ನಿಂದ ಆರಂಭವಾದ ಪಯಣ ಇಂದು ಸುಮಾರು 5500 ಟ್ರಕ್ಗಳನ್ನು ಒಳಗೊಂಡ ಭಾರತದ ಅತಿದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ರೂಪುಗೊಂಡಿರುವುದರಲ್ಲಿ, ನೂರಾರು ಬಸ್ಗಳ ಮಾಲೀಕತ್ವದಲ್ಲಿ, ‘ವಿಜಯವಾಣಿ’ ನಾಡಿನ ನಂ. 1 ದಿನಪತ್ರಿಕೆಯಾಗಿ ಹೊರಹೊಮ್ಮುವಲ್ಲಿ ಶ್ರೀಯುತರ ಪರಿಶ್ರಮ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವಲ್ಲಿ ನಿರ್ದೇಶಕಿ ರಿಷಿಕಾ ಶರ್ಮಾ ಯಶಸ್ವಿಯಾಗಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ನಿಹಾಲ್ ರಜಪೂತ್ ಹೀಗೆ ಎಲ್ಲ ಕಲಾವಿದರೂ ನೈಜವಾಗಿ ಅಭಿನಯಿಸಿದ್ದಾರೆ. ಈ ಸಂದರ್ಭದಲ್ಲಿ ಈ ಚಲನಚಿತ್ರದ ಗೆಲುವಿನ ರೂವಾರಿ ಡಾ. ವಿಜಯ ಸಂಕೇಶ್ವರ ಸರ್ ಭಾವಚಿತ್ರವನ್ನು ಪೆನ್ನಿನಲ್ಲಿ ಚಿತ್ರಿಸಿ ಆದರ್ಶ ವ್ಯಕ್ತಿತ್ವದ ಸಾಕಾರ ಮೂರ್ತಿ, ಸಾವಿರಾರು ಜನರಿಗೆ ಅನ್ನದಾತರೆನಿಸಿಹ ಡಾ. ವಿಜಯ ಸಂಕೇಶ್ವರ ಅವರಿಗೆ ಅರ್ಪಿಸುವ ಪ್ರಯತ್ನ ಮಾಡಿದ್ದೇನೆ’
| ವಿ.ಎಸ್. ಕುಮಾರ್ ಮುಖ್ಯಲೆಕ್ಕಾಧಿಕಾರಿಗಳ ಆಪ್ತ ಸಹಾಯಕ, ಕರ್ನಾಟಕ ಜಲಮಂಡಳಿ