ನ್ಯೂಸ್

ತನ್ನ ವೈದ್ಯರ ಬಳಿ ಹೋಗಿ ಮನೆಯ ದಾರಿ ಕೇಳಿದ ನಾಯಿ!

ನವದೆಹಲಿ: ಸಾಮಾನ್ಯವಾಗಿ ಪರಿಚಿತರು ಇಲ್ಲವೇ ಸಂಬಂಧಿಕರ ಮನೆಗೆ ಹೋಗುವಾಗ ದಾರಿ ತಪ್ಪಿದರೆ ಅಥವಾ ವಿಳಾಸದಲ್ಲಿ ಗೊಂದಲವಾದರೆ ತಕ್ಷಣವೇ ಅವರಿಗೆ ಕರೆ ಮಾಡಿಯೋ ಅಥವಾ ನಾವಿರುವ ಸ್ಥಳ ಸೂಚಿಸಿ, ಅಲ್ಲಿಗೆ ಬಂದು ಕರೆದೊಯ್ಯುವಂತೆಯೋ ಹೇಳುವುದು ಸಾಮಾನ್ಯ. ಆದರೆ, ಮಾತು ಬಾರದ ಪ್ರಾಣಿಗಳು ಏನಾದರೂ ದಾರಿ ತಪ್ಪಿದರೆ ಏನು ಮಾಡುತ್ತವೆ?

ಕೆಲವೊಮ್ಮೆ ವಾಸನೆ ಗ್ರಹಿಸಿಕೊಂಡು ಮನೆಯ ಹಾದಿ ತುಳಿಯುತ್ತವೆ. ಇಲ್ಲವೇ ಈ ನಾಯಿ ಮಾಡಿದಂತೆ ತನಗೆ ಚಿಕಿತ್ಸೆ ನೀಡುವ ಪಶುವೈದ್ಯರ ಬಳಿ ಹೋಗಿ ತನ್ನ ಮನೆಯ ವಿಳಾಸ ಕೇಳಿಕೊಂಡು ಮನೆಯನ್ನು ಸೇರಿಕೊಳ್ಳುತ್ತವೆ!

ಹೌದು. ಥಾಯ್ಲೆಂಡ್​ನ ನಾಯಿಯೊಂದು ತನಗೆ ಮಾತನಾಡಲು ಬಾರದಿದ್ದರೂ ತನ್ನ ಮಾಲೀಕರ ಮನೆಯನ್ನು ಸುರಕ್ಷಿತವಾಗಿ ಸೇರಿದೆ. ಇದಕ್ಕಾಗಿ ಅದು ತಾನು ಮರಿಯಾಗಿದ್ದಾಗಿನಿಂದಲೂ ಚಿಕಿತ್ಸೆ ಕೊಡುತ್ತಿದ್ದ ಪಶುವೈದ್ಯರ ನೆರವು ಪಡೆದುಕೊಳ್ಳುವ ಬುದ್ಧಿವಂತಿಕೆ ತೋರಿದೆ.

ಥಾಯ್ಲೆಂಡ್​ನ ಸಾಮುತ್​ ಪ್ರಕಾನ್​ನ ಮುವಾಂಗ್​ ಜಿಲ್ಲೆಯ ರೆಸ್ಟೋರೆಂಟ್​ನ ಮಾಲಕಿ ಸುನೀ ಬನ್ವಾರ ಎಂಬಾಕೆ ಕೀವ್​ ನೆಗ್ರೆನ್​ ಎಂಬ ನಾಯಿಯನ್ನು ಸಾಕಿದ್ದಳು. ಈ ನಾಯಿ ಮರಿಯಾಗಿದ್ದಾಗಿನಿಂದಲೂ ಫುತ್ತಾರಾಕ್ಸ್​ ಅನಿಮಲ್​ ಕ್ಲಿನಿಕ್​ನಲ್ಲಿ ಲಸಿಕೆಗಳನ್ನು ಹಾಕಿಸುವ ಜತೆಗೆ ಅಗತ್ಯವಾದಾಗಲೆಲ್ಲ ಚಿಕಿತ್ಸೆ ಕೊಡಿಸುತ್ತಿದ್ದಳು. ಹಾಗಾಗಿ ಈ ಕ್ಲಿನಿಕ್​ನ ಪಶುವೈದ್ಯ ಸೇಂಗ್ಯುಡೆನ್​ ಚೋಟೆಪನಸ್​ ಅವರ ಪರಿಚಯ ಈ ನಾಯಿಗೆ ಚೆನ್ನಾಗಿತ್ತು.

ಬನ್ವಾರ ಶುಕ್ರವಾರ ತನ್ನ ರೆಸ್ಟೋರೆಂಟ್​ನಲ್ಲಿ ಗ್ರಾಹಕರಿಗೆ ಖಾದ್ಯಗಳನ್ನು ವಿತರಿಸುವಲ್ಲಿ ಮಗ್ನಳಾಗಿದ್ದಳು. ಅದ್ಯಾವುದೋ ಮಾಯೆಯಲ್ಲಿ ನೆಗ್ರೆನ್​ ರೆಸ್ಟೋರೆಂಟ್​ನಿಂದ ಹೊರಹೋಗಿ, ದಾರಿ ತಪ್ಪಿತು. ಅದು ಹೇಗೋ ಚೋಟೆಪನಸ್​ ಅವರ ಕ್ಲಿನಿಕ್​ ಬಳಿಗೆ ಬಂದು ಕ್ಲಿನಿಕ್​ ಹಾಕಿದ್ದ ಗಾಜಿನ ಬಾಗಿಲನ್ನು ಕೆರೆಯುತ್ತಾ, ಕ್ಲಿನಿಕ್​ನಲ್ಲಿ ಇದ್ದವರ ಗಮನವನ್ನು ತನ್ನತ್ತ ಸೆಳೆಯಲು ಯತ್ನಿಸಿತ್ತು. ಇದನ್ನು ಗಮನಿಸಿದ ಚೋಟೆಪನಸ್​ ಅವರ ಸಹಾಯಕಿ ಕ್ಲಿನಿಕ್​ನಿಂದ ಹೊರಬಂದು ನಾಯಿಯನ್ನು ಪರಿಶೀಲಿಸಿದರು. ಅದು ನೆಗೆದಾಡುವ ಜತೆಗೆ ಜೋರಾಗಿ ಬೊಗಳಲು ಆರಂಭಿಸಿತು.

ಆಗಿದ್ದಾಗಲಿ ಎಂದು ಆಕೆ ನೆಗ್ರೆನ್​ ಅನ್ನು ಆಕೆ ಕ್ಲಿನಿಕ್​ನ ಒಳಗೆ ಕರೆದೊಯ್ದಾಗ ತನಗೆ ಚಿಕಿತ್ಸೆ ಕೊಡುವ ಚೋಟೆಪನಸ್​ ಅವರನ್ನು ಗುರುತಿಸಿದ ನೆಗ್ರೆನ್​ ಕುಣಿದಾಡಲಾರಂಭಿಸಿತು. ತಮ್ಮ ದಾಖಲಾತಿ ಪುಸ್ತಕವನ್ನು ತಡಕಾಡಿದ ಚೋಟೆಪನಸ್​ ಆ ನಾಯಿಯ ಮಾಲೀಕರ ವಿಳಾಸ ಮತ್ತು ಫೋನ್​ ನಂಬರ್​ ಅನ್ನು ಪತ್ತೆ ಮಾಡಿದರು.

ಕರೆ ಮಾಡಿದಾಗ, ತಮ್ಮ ಸಾಕುನಾಯಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಕಾಣೆಯಾಗಿರುವುದಾಗಿ ಬನ್ವಾರ ಅಲವತ್ತುಕೊಂಡರು ಎನ್ನಲಾಗಿದೆ. ಆಗ ವೈದ್ಯರು ಅದು ತಮ್ಮ ಕ್ಲಿನಿಕ್​ಗೆ ಬಂದಿರುವ ವಿಷಯ ತಿಳಿಸಿ, ಬಂದು ಕರೆದೊಯ್ಯುವಂತೆ ಬನ್ವಾರ ಅವರಿಗೆ ತಿಳಿಸಿದರು.

ಬಳಿಕ ಕ್ಲಿನಿಕ್​ಗೆ ತೆರಳಿದ ಬನ್ವಾರ ತಮ್ಮ ನಾಯಿಯನ್ನು ಕಂಡು ತುಂಬಾ ಖುಷಿಯಾಗಿದ್ದಲ್ಲದೆ, ಅದನ್ನು ಮನೆಗೆ ಕರೆತಂದರು. ಕ್ಲಿನಿಕ್​ನ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದ ನೆಗ್ರೆನ್​ ದೃಶ್ಯಗಳನ್ನು ವೈದ್ಯರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪ್ರಕಟಿಸಿದ್ದರು. ಅದು ತುಂಬಾ ವೈರಲ್​ ಆಗಿದೆ. ನೆಟ್ಟಿಗರಂತೂ ನೆಗ್ರೆನ್​ನ ಬುದ್ಧಿವಂತಿಕೆ ಮಾರುಹೋಗಿ ಅದನ್ನು ಕೊಂಡಾಡುತ್ತಿದ್ದಾರೆ.