ನ್ಯೂಸ್

ಎರಡೂವರೆ ತಿಂಗಳ ಹೆಣ್ಣುಮಗು ಅಳುವ ಸದ್ದೇ ಇರಲಿಲ್ಲ; ಲಾಕ್​ಡೌನ್​ನಿಂದಾಗಿ ಹೆತ್ತಮ್ಮ ಮಾಡಿದ್ದೇನು?

ಕೋಲ್ಕತ್ತ: ಆಕೆ ಮನೆ ಕೆಲಸ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದಳು. ಪತಿ ದಿನಗೂಲಿ ಮಾಡಿಕೊಂಡು ಅಷ್ಟಿಷ್ಟು ಸಂಪಾದನೆ ಮಾಡುತ್ತಿದ್ದ. ಆದರೆ ಕಳೆದ ಮೂರು ತಿಂಗಳಿಂದ ಇಬ್ಬರು ಕೆಲಸ ಕಳೆದುಕೊಂಡಿದ್ದರು.

ಕರೊನಾ ಭಯದಿಂದಾಗಿ ಮನೆಯವರು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದ್ದರೆ, ಪತಿಗೆ ಎಲ್ಲಿಯೂ ಕೆಲಸವಿರಲಿಲ್ಲ. ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಿತ್ತು. ಆದರೆ, ಲಾಕ್​ಡೌನ್​ ಸಮಯದಲ್ಲಿಯೇ ಹುಟ್ಟಿದ ಹೆಣ್ಣುಮಗುವಿಗೆ ಏನು ಮಾಡುವುದು. ತನ್ನ ಹೊಟ್ಟೆಗೆ ಇಲ್ಲದಿದ್ದಾಗ ಮಗುವಿಗೆ ಹಾಲೂಡಿಸಲು ಎಲ್ಲಿ ಸಾಧ್ಯ..? ಹೀಗಾಗಿ ಮಗುವಿನ ತಂದೆ ಬಪನ್​ ಧಾರಾ ಹಾಗೂ ತಾಯಿ ತಪಸಿ ಕರುಳಬಳ್ಳಿಯನ್ನೇ ದೂರ ಮಾಡುವ ನಿರ್ಧಾರಕ್ಕೆ ಬಂದಿದ್ದರು.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾತಲ್​ ಪ್ರದೇಶದಲ್ಲಿ ದಂಪತಿ ನೆಲೆಸಿದ್ದರು. ನೆರೆಯವರು ಕೆಲ ದಿನಗಳಿಂದ ದಂಪತಿ ಕೈಯಲ್ಲಿ ಮಗುವಿದ್ದುದನ್ನೇ ನೋಡಿರಲಿಲ್ಲ. ಅದರ ಅಳುವನ್ನೂ ಕೇಳಿರಲಿಲ್ಲ. ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ವಿಚಾರಿಸಿದಾಗ ದಂಪತಿ ಮಗುವನ್ನು ಕೇವಲ ಮೂರು ಸಾವಿರ ರೂ.ಗೆ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹೌರಾದ ಸಂಬಂಧಿಕ ಮನೆಯಲ್ಲಿದ್ದ ಮಗುವನ್ನು ಪೊಲೀಶರು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಈ ನಡುವೆ ದಂಪತಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.