ಲಾಸ್ ಏಂಜಲೀಸ್: ಕೆಲವು ತಿಂಗಳ ಹಿಂದೆ ಕಾಳ್ಗಿಚ್ಚಿನಿಂದ ಹೊತ್ತಿ ಉರಿದಿದ್ದ ಲಾಸ್ ಏಂಜಲೀಸ್ ಈಗ ಟ್ರಂಪ್ ಸರ್ಕಾರದ ವಲಸೆ ನೀತಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಹೊತ್ತಿ ಉರಿಯುತ್ತಿದೆ. ಲಾಸ್ ಏಂಜಲೀಸ್ ನಲ್ಲಿ ಪ್ರತಿಭಟನೆ ತೀವ್ರವಾಗಿದ್ದು, ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕರ್ಫ್ಯೂ ಹೇರಿದೆ.
ಕಳೆದ ಹಲವು ದಿನಗಳಿಂದ ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್ನಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀ ಸರು ಮತ್ತು ಐಸಿಇ ಸಿಬ್ಬಂದಿಯನ್ನು ಗುರಿ ಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರಕ್ಷುಬ್ಧ ಪರಿಸ್ಥಿತಿಯ ಲಾಭ ಪಡೆದು ಹಲವರು ಅಂಗಡಿಗಳನ್ನು ಲೂಟಿ ಮಾಡುತ್ತಿದ್ದು, ಅರಾಜಕತೆ ಸೃಷ್ಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರತಿಭಟನೆಯ ಐದನೇ ದಿನ ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ತುರ್ತು ಪರಿಸ್ಥಿತಿ ಘೋಷಿಸಿದ್ದು, ಮಂಗಳವಾರ ರಾತ್ರಿ 8 ಗಂಟೆಯಿಂದ ಬುಧವಾರ ಬೆಳಗ್ಗೆ 6ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿದ್ದು, ಭದ್ರತೆಗಾಗಿ ಪೊಲೀಸರು ಮತ್ತು ರಾಷ್ಟ್ರೀಯ ಗಾರ್ಡ್ಸ್ನ ಯೋಧರನ್ನು ನಿಯೋಜಿಸಿದ್ದಾರೆ. ಮುಂದಿನ ಹಲವು ದಿನಗಳವರೆಗೆ ಕರ್ಫ್ಯೂ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಲಾಸ್ ಏಂಜಲೀಸ್ನ ಡೌನ್ಟೌನ್ ಪ್ರದೇಶದಲ್ಲಿ ಹೆಚ್ಚಿನ ಪ್ರತಿಭಟನೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಡೌನ್ಟೌನ್ನ 1 ಚದರ ಮೈಲಿ (2.5 ಚದರ ಕಿ.ಮೀ.) ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
ಬಂಧನ ಮುಂದುವರಿಕೆ: ವಲಸೆ ಅಧಿಕಾರಿಗಳು ದೇಶದಾ ದ್ಯಂತ ಬಂಧನ ನಡೆಸುತ್ತಿದ್ದಾರೆ. ಮಂಗಳವಾರ ಒಂದೇ ದಿನ ಲಾಸ್ ಏಂಜಲೀಸ್ ಪೊಲೀಸರು 197 ಜನರನ್ನು ಬಂಧಿಸಿದ್ದಾರೆ. ಶನಿವಾರದಿಂದ 300 ಜನರನ್ನು ಬಂಧಿಸಿದ್ದಾರೆ. 101 ಫ್ರೀ ವೇಯನ್ನು ಆಕ್ರಮಿಸಿಕೊಂಡ ಆರೋಪದ ಮೇಲೆ 67 ಜನರನ್ನು ಬಂಧಿಸಲಾಗಿದೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ 4000 ರಾಷ್ಟ್ರೀಯ ಗಾರ್ಡ್ಸ್ ಗಳು ಮತ್ತು 700 ಯುಸ್ ಮರೀನ್ ಯೋಧರನ್ನು ನಿಯೋಜಿಸಿದ್ದರು. ಯೋಧರ ನಿಯೋಜನೆ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದರಿಂದ ಕರ್ಫ್ಯೂ ಹೇರುವ ಸ್ಥಿತಿ ನಿರ್ವಣವಾಗಿದೆ ಎಂದು ಸ್ಥಳೀಯಾಡಳಿತ ಟ್ರಂಪ್ ಸರ್ಕಾರವನ್ನು ದೂರಿದೆ.
ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಅಧಿಕಾರಿಗಳು ಅಕ್ರಮ ವಲಸಿಗರ ಅಮೆರಿಕದಲ್ಲಿ ನೆಲೆಸಿ ದಿನಗೂಲಿ ನೌಕರರು, ಕಾರು ತೊಳೆಯುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟ್ರಂಪ್ ಎರಡನೇ ಅವಧಿಯಲ್ಲಿ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ದೇಶಾದ್ಯಂತ ಬಂಧಿಸಲಾಗಿದೆ. ಲಾಸ್ ಏಂಜಲೀಸ್ ನಲ್ಲೂ ಹಲವರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಗಡಿಪಾರು ಮತ್ತು ಕುಟುಂಬಸ್ಥರಿಂದ ದೂರವಾಗುವ ಆತಂಕ ವಲಸಿಗರಲ್ಲಿ ಮನೆ ಮಾಡಿದ್ದು, ಟ್ರಂಪ್ ವಲಸೆ ನೀತಿಯನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು.
ಲಾಸ್ ಏಂಜಲೀಸ್ನಲ್ಲಿ ಪ್ರತಿಭಟನೆಯನ್ನು ನಿಯಂತ್ರಿಸಲು ತುರ್ತು ಸಂದರ್ಭಗಳಲ್ಲಿ ಅಮೆರಿಕದ ಮಿಲಿಟರಿ ಪಡೆಗಳನ್ನು ನಿಯೋಜಿಸಲು ಅಧಿಕಾರ ನೀಡುವ ದಂಗೆ ಕಾಯ್ದೆಯನ್ನು ಜಾರಿಗೆ ತರುವ ಆಯ್ಕೆಯನ್ನೂ ಮುಕ್ತವಾಗಿಟ್ಟಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಆಧಿಕಾರಕ್ಕೆ ಬಂದ ಬಳಿಕ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಸಾವಿರಾರು ಜನರನ್ನು ಬಂಧಿಸಲಾಗಿದ್ದರೆ, ನೂರಾರು ಜನರನ್ನು ಗಡಿಪಾರು ಮಾಡಲಾಗುತ್ತಿದೆ. ಟ್ರಂಪ್ ವಲಸೆ ನೀತಿಗೆ ಭಾರಿ ವಿರೋಧ ಕೇಳಿ ಬರುತ್ತಿದೆ. ಇದರ ಜತೆಯಲ್ಲೇ ಪ್ರತಿಭಟನೆಯನ್ನು ಹತ್ತಿಕ್ಕಲು ಟ್ರಂಪ್ ಸರ್ಕಾರ ಯೋಧರನ್ನು ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಈಗ ದಂಗೆಯ ರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರು ಪ್ರಾಣಿಗಳು ಮತ್ತು ವಿದೇಶಿ ಶತ್ರುಗಳೆಂದು ಟ್ರಂಪ್ ಟೀಕಿಸಿದ್ದು, ಲಾಸ್ ಏಂಜಲೀಸ್ ಅನ್ನು ಕಸದ ರಾಶಿ ಎಂದೂ ಕರೆದಿದ್ದಾರೆ.
ತಕ್ಷಣವೇ ಲಾಸ್ ಏಂಜಲೀಸ್ ನಲ್ಲಿ ಐಸಿಇ ದಾಳಿ ಮತ್ತು ಗಡಿಪಾರು ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಸಾಮೂಹಿಕ ಗಡಿಪಾರಿನ ಬದಲು ಕಾನೂನು ಬದ್ಧವಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ. ರಾಷ್ಟ್ರೀಯ ಗಾರ್ಡ್ಸ್ ಮತ್ತು ಯುಎಸ್ ಮರೀನ್ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ಸಾವಿರ ಚದರ ಮೈಲಿ ವಿಸ್ತೀರ್ಣದಲ್ಲಿ ಹರಡಿರುವ ಲಾಸ್ ಏಂಜಲೀಸ್ ಕೌಂಟಿ ಬೆವರ್ಲಿ ಹಿಲ್ಸ್, ಹಾಲಿವುಡ್, ಲಾಂಗ್ ಬೀಚ್, ಮಾಲಿಬು, ಪಸಾಡೆನಾ, ಸಾಂತಾ ಮೋನಿಕಾ ಸೇರಿದಂತೆ ಹಲವು ಪ್ರದೇಶಗಳನ್ನು ಒಳಗೊಂದಿಗೆ ಇಲ್ಲಿ ಒಟ್ಟು 10 ಮಿಲಿಯನ್ (1 ಕೋಟಿ) ಜನರು ವಾಸಿಸುತ್ತಿದ್ದಾರೆ. ಇನ್ನು ಲಾಸ್ ಏಂಜಲೀಸ್ ನಗರವೊಂದರಲ್ಲೇ 3.9 ಮಿಲಿಯನ್ (39 ಲಕ್ಷ ಜನರಿದ್ದಾರೆ). ಇಷ್ಟು ಜನಸಂಖ್ಯೆಯಲ್ಲಿ ಶೇ. 35 ರಷ್ಟು ಜನರು ಹೊರ ದೇಶಗಳಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಸಕ್ರಮವಾಗಿ ಇಲ್ಲಿ ನೆಲೆಸಿರುವವರಿಗಿಂತ ಹೆಚ್ಚಿನ ಜನರು ಅಕ್ರಮವಾಗಿ ಇಲ್ಲಿ ವಾಸಿಸುತ್ತಿದ್ದಾರೆ. 2020 ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ನಡೆಸಿದ ಅಧ್ಯಯನದ ಪ್ರಕಾರ 9 ಲಕ್ಷ ದಾಖಲೆರಹಿತ ವಲಸಿಗರು ಲಾಸ್ ಏಂಜಲೀಸ್ನಲ್ಲಿದ್ದಾರೆ.