ಬನ್ನೂರು: ಎಲ್ಲರೂ ಒಗ್ಗಟ್ಟಿನಿಂದ ಸಾಗಿದರೆ ಮಾತ್ರ ಪ್ರತಿಯೊಬ್ಬ ಲಾರಿ ಮಾಲೀಕರು ಉತ್ತಮ ರೀತಿಯಲ್ಲಿ ಜೀವನ ಸಾಗಿಸಬಹುದು ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಾ.ಜಿ.ಆರ್.ಷಣ್ಮುಗಪ್ಪ ತಿಳಿಸಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಲಾರಿ ಮಾಲೀಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಲಾರಿ ಮಾಲೀಕರೆಂದರೆ ಕೆಲವರು ಸಂಕುಚಿತ ಮನೋಭಾವದಿಂದ ಕಾಣುವ ಮೂಲಕ ಅಸಡ್ಡೆಯಿಂದ ಕಾಣುತ್ತಾರೆ. ಅದಕ್ಕೆ ಕಾರಣವೇ ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದು. ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಸಾಗುವ ಮೂಲಕ ನಮ್ಮ ಗುರಿಯನ್ನು ತಲುಪಬೇಕು ಎಂದು ತಿಳಿಸಿದರು.
ಇಂದು ಲಾರಿ ಮಾಲೀಕರ ಜೀವನ ಪರಿಸ್ಥಿತಿ ಶೋಚನೀಯವಾಗಿದ್ದು, ಲೆಕ್ಕಾಚಾರವಿಲ್ಲದೆ ಬಾಡಿಗೆ ಪಡೆದು ನಷ್ಟವನ್ನು ಅನುಭವಿಸುತ್ತಾರೆ. ಇವೆಲ್ಲದರ ನಿರ್ಮೂಲನೆಗಾಗಿ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಲಾರಿ ಮಾಲೀಕರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಹಗಲು-ರಾತ್ರಿ ಕೆಲಸ ಮಾಡುವ ಲಾರಿ ಡ್ರೈವರ್‌ಗಳ ಜೀವನ ಸ್ಥಿತಿಯನ್ನು ಸರ್ಕಾರ ಗಮನಿಸಬೇಕು. ಒಂದೇ ಒಂದು ಲಾರಿ ಇಟ್ಟಿರುವಂತ ಮಾಲೀಕನು ಸಹ ಉತ್ತಮ ರೀತಿಯಲ್ಲಿ ಜೀವನ ಮಾಡಲು ಸಂಘದ ಸಹಕಾರ ಅತ್ಯಮೂಲ್ಯ ಎಂದು ತಿಳಿಸಿದರು.
ಪಟ್ಟಣದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಶಿಭೂಷಣ್ ಮಾತನಾಡಿ, ಸ್ಥಳೀಯ ಲಾರಿ ಮಾಲೀಕರ ಉಳಿವಿಗಾಗಿ ಸಂಘವನ್ನು ಸ್ಥಾಪನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿರು ಎಲ್ಲ ಲಾರಿ ಮಾಲೀಕರಿಗೂ ನಿರಂತರವಾಗಿ ಬಾಡಿಗೆ ದೊರೆಯಲಿದ್ದು, ಇದರಿಂದ ಗ್ರಾಮೀಣ ಭಾಗದ ರೈತರ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಅಲ್ಲದೆ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂದು ತಿಳಿಸಿದರು.
ಪಟ್ಟಣದ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಮದನ್‌ಕುಮಾರ್, ಶ್ರೀನಿವಾಸರಾವ್, ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್‌ಖಾದರ್ ಶಾಹಿದ್, ಎಂ.ವಿಶ್ವನಾಥ್, ಕಾರ್ಯದರ್ಶಿ ಎಂ.ಎನ್.ಅನಿಲ್, ಲಾರಿ ಎಜೆಂಟ್ ಸ್ವಾಮಿ, ಚಾಮರಾಜನಗರ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಯಾವುಲ್ಲಾ, ಮಂಡ್ಯ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ವೇಣುಗೋಪಾಲ್, ಸಿ.ವೈ.ನಾಗರಾಜು, ಎ.ಎನ್.ಸ್ವಾಮಿ, ಬಿ.ಸಿ.ಹುಚ್ಚೇಗೌಡ, ಸಿದ್ದರಾಜು, ಸಿ.ಎಸ್.ಸತೀಶ್, ಬಸವರಾಜು, ನಿರ್ದೇಶಕರಾದ ಕೆ.ಪ್ರಕಾಶ್, ಮಲ್ಲೇಶ್, ಟಿ.ಎನ್.ಮಹೇಶ್, ಅಭಿಲಾಷ್, ರಾಜಶೇಖರ್, ಆರ್.ಯೋಗೇಶ್, ಸಿದ್ದೇಗೌಡ, ಮಿಥುನ್, ಎಂ.ಎಸ್.ಮಹೇಶ್, ಜಿ.ಪಿ.ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.