ನ್ಯೂಸ್

ಭೀಕರ ಅಪಘಾತ: ಮಹಿಳೆಯ ತಲೆ ನಜ್ಜುಗುಜ್ಜು, ಇನ್ನೊಬ್ಬಾಕೆಯ ಎರಡೂ ಕಾಲು ಕಟ್; ಬದುಕುಳಿದ ಮಗು!

ಬೆಂಗಳೂರು: ಸಿಮೆಂಟ್ ತುಂಬಿದ್ದ ಲಾರಿಯೊಂದು ಬೈಕ್​ ಮೇಲೆ ಸಾಗಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಆಕೆಯ ತಾಯಿಯ ಎರಡೂ ಕಾಲು ಕಟ್​ ಆಗಿದೆ. ಇನ್ನೊಂದೆಡೆ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಬೆಂಗಳೂರಿನ ನಾಯಂಡಹಳ್ಳಿ ಬಳಿ ಮಧ್ಯಾಹ 2ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಅನುಷಾ ಸಾವಿಗೀಡಾದ ಮಹಿಳೆ. ಈಕೆ ತನ್ನ ತಾಯಿ ಮತ್ತು 7 ವರ್ಷದ ಮಗುವನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ದೀಪಾಂಜಲಿನಗರ ಕಡೆಯಿಂದ ಬರುತ್ತಿದ್ದರು. ಈ ಸಂದರ್ಭದಲ್ಲಿ ಸಿಮೆಂಟ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಬೈಕ್​ ಮೇಲೆ ಹರಿದು ಬಳಿಕ ಕೆಎಸ್​ಆರ್​​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ.

ಅನುಷಾ

ಅಪಘಾತದ ತೀವ್ರತೆಗೆ ಅನುಷಾ ತಲೆ ನಜ್ಜುಗುಜ್ಜಾಗಿದ್ದಾರೆ. ಈಕೆಯ ತಾಯಿಯ ಎರಡೂ ಕಾಲು ಕಟ್ ಆಗಿದೆ. ಆದರೆ 7 ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದ್ದರಿಂದ ಲಾರಿ ನಿಂತಿದೆ. ಇಲ್ಲದಿದ್ದರೆ ಇನ್ನೊಂದಷ್ಟು ಸಾವು-ನೋವಿಗೆ ಕಾರಣವಾಗುವ ಸಾಧ್ಯತೆ ಇರುತ್ತಿತ್ತು ಎನ್ನಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಲಾರಿಗೆ ಕಲ್ಲು ತೂರಿದ್ದು, ಮುಂಭಾಗದ ಗಾಜುಗಳು ಒಡೆದುಹೋಗಿವೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.