ಶನಿ ಲೋಕವನ್ನು ಬೆಳಗಿಸುವ ಭಗವಾನ್ ಸೂರ್ಯದೇವನ ಮಗ. ತಾಯಿ ಛಾಯಾದೇವಿ. ಶನಿಯೆಂದರೆ ಕರ್ಮಫಲ ದಾತ. ಯಮನ ಹಿರಿಯ ಸಹೋದರ ಈತ. ಶನಿಯ ಬಣ್ಣ ನೀಲ ಅಂದರೆ ಕಪ್ಪಾದ ಮೈಕಾಂತಿಯುಳ್ಳವ, ಕಾಕ ವಾಹನದಲ್ಲಿ ಆಸೀನ. ನೀಲ ವಸ್ತ್ರವನ್ನು ಉಟ್ಟಿರುವವ. ಧನುಸ್ಸು ಬಾಣಧಾರೀ. ಇದು ಶನಿಯ ಆಕಾರ. ಶ್ಲೋಕವೊಂದು ಹೀಗೆನ್ನುತ್ತದೆ.
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|ಛಾಯಾ ಮಾರ್ತಾಂಡ ಸಂಭೂತಂ ತನ್ನಮಾಮಿ ಶನೈಶ್ಚರಂ||
ಶ್ರೀಮನ್ನಾರಾಯಣನ ಸಂಕಲ್ಪದಂತೆ ಲೋಕ ಪೀಡಕರನ್ನು ಪೀಡಿಸುವುದಕ್ಕಾಗಿ, ಧರ್ಮದಂತೆ ನಡೆಯುವವರನ್ನು ರಕ್ಷಿಸುವುದ ಕ್ಕಾಗಿ ಶನಿಯ ಜನ್ಮವಾಯಿತೆಂಬುದು ಪ್ರತೀತಿ. ‘ಶನಿ’ ನವ ಗ್ರಹಗಳಲ್ಲಿ ವಿಶಿಷ್ಟವಾದ ಹೆಸರು. ಅತ್ಯಂತ ಸಾವಕಾಶವಾಗಿ ಚಲಿಸುವ ಗ್ರಹ. ಶನೈಃ ಅಂದರೆ ನಿಧಾನವಾಗಿ, ಚರತಿ ಎಂದರೆ ಕ್ರಮಿಸುವವ, ಆದ್ದರಿಂದ ಆತ ಶನೈಶ್ಚರ. ತನ್ನ ಸಹೋದರನಾದ ಯಮನೊಡನೆ ಕಾದಾಡುವ ಸಮಯದಲ್ಲಿ ಒಂದು ಕಾಲು ಊನವಾಗಿಸಿಕೊಂಡ. ಹಾಗಾಗಿ ಹನ್ನೆರಡು ರಾಶಿಗಳನ್ನು ಒಂದು ಬಾರಿ ಕ್ರಮಿಸಲು ಈತನಿಗೆ ರಾಶಿ ಯಲ್ಲಿ ಎರಡೂವರೆ ವರ್ಷದಂತೆ ಮೂವತ್ತು ವರ್ಷ ಬೇಕು.
ಸಾಮಾನ್ಯವಾಗಿ ಲೋಕದಲ್ಲಿ ಶನಿಯೆಂದರೆ ವೀರ-ಶೂರ-ಕ್ರೂರ-ದುಃಖ ದಾಯಕ- ಕಷ್ಟವನ್ನು ಕೊಡುವಾತ ಎಂಬೆಲ್ಲ ಭಾವನೆಯಿದೆ. ಒಂದು ಕಥೆ ಹೀಗಿದೆ: ಹುಟ್ಟಿದ ಕೂಡಲೇ ತನ್ನ ದೃಷ್ಟಿಯಿಂದ ತಂದೆ ಯಾದ ಸೂರ್ಯನನ್ನೆ ಶನಿ ಪೀಡಿಸಿದ, ಕುಷ್ಠ ರೋಗಿಯನ್ನಾಗಿಸಿದ. ರವಿಯ ರಥಕ್ಕೆ ಕಟ್ಟಿದ ಕುದುರೆಗಳ ಕಣ್ಣುಗಳನ್ನು ಕುರುಡಾಗಿಸಿದ, ಸಾರಥಿಯನ್ನು ಹೆಳವನಾಗಿಸಿದ. ಪರಶಿವನ ಬಳಿಗೆ ಹೋಗಿ ಪೀಡಿಸುವುದಕ್ಕಾಗಿ ಯಾವಾಗ ಬರಲೆಂದು ಕೇಳಿದ. ಶನಿಯ ಪೀಡೆಯಿಂದ ತಪ್ಪಿಸಿಕೊಳ್ಳಲು ಶಿವ ನಾಳೆ ಬಾ ಎನ್ನುತ್ತಾನೆ.
ಮರುದಿವಸ ಶನಿ ಬರುವುದರೊಳಗೆ ಕೈಲಾಸ ಪರ್ವತ ದಿಂದಿಳಿದು ಬಿದಿರುಮೆಳೆಯೊಳಗೆ ಇರುವೆಯಾಗಿ ಮರೆಯಾದ. ಸ್ವಲ್ಪ ಸಮಯದ ನಂತರ ಶನಿಗೆ ಮುಖಾ ಮುಖಿಯಾಗಿ ತಾನೇ ಗೆದ್ದೆನೆಂಬ ಭಾವದಿಂದ ನಕ್ಕ. ಆಗ ಶನಿ ಹೇಳುವ ಮಾತು: ‘ಜಗತ್ತಿನಲ್ಲಿ ಯಾರಿಗೂ ಹೆದರದ ಲೋಕಾಧ್ಯಕ್ಷನಾದ ನೀನು ನನಗೆ ಹೆದರಿ ಬಿದಿರು ಮೆಳೆಯಲ್ಲಿ ಇರುವೆಯಾದೆೆಯಲ್ಲ: ಸಾಮಾನ್ಯ ಮನುಷ್ಯರಂತೆ ನೀನೂ ಆಗಿಬಿಟ್ಟೆ!’ ಶನಿಯ ಮಾತು ಶಿವನಿಗೆ ಮರ್ವಘಾತ ಉಂಟು ಮಾಡಿತು. ಶನಿಯ ಬುದ್ಧಿವಂತಿಕೆಗೆ ತಲೆದೂಗಿದ ಆತ ಶನೀಶ್ವರನೆಂಬ ಬಿರುದನ್ನಿತ್ತು ಸಮ್ಮಾನಿಸಿದ.
ಶನಿ ನಿಜವಾಗಿ ಹೆದರಿಸುವ ದೇವತೆಯೇ? : ಖಂಡಿತವಾಗಿಯೂ ಅಲ್ಲ. ಶನಿ ಮತ್ತು ಯಮ ಸಹೋದರರು. ಯಮ ನಾವು ಸತ್ತ ನಂತರ ನಮ್ಮ ಕರ್ಮಗಳಿಗೆ ಫಲ ಕೊಡುತ್ತಾನೆ. ಆದರೆ ಶನಿ ನಮ್ಮ ಜೀವಿತದ ಅವಧಿಯಲ್ಲಿಯೇ ಕೊಡುವಾತ. ಒಳ್ಳೆಯವರಿಗೆ ಒಳ್ಳೆಯವ. ಕೆಟ್ಟವರಿಗೆ ಕೆಟ್ಟವ. ಒಂದರ್ಥದಲ್ಲಿ ನ್ಯಾಯಾಧೀಶನಂತೆ.
ಜಯಂತಿ ಆಚರಣೆ ಹೇಗೆ?: ಶನಿಪೀಡೆ ಇರಲಿ ಇಲ್ಲದಿರಲಿ ಶನೈಶ್ಚರ ಜಯಂತಿಯನ್ನು ಆಸ್ತಿಕರೆಲ್ಲರೂ ಆಚರಿಸುತ್ತಾರೆ. ಈ ದಿನ ಪ್ರಾತಃಕಾಲದಲ್ಲಿ ನದೀ ಸಂಗಮ ಅಥವಾ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿ ಶುದ್ಧವಾದ ವಸ್ತ್ರವನ್ನು ಧರಿಸಿ ಶನಿಯ ಮಂದಿರಕ್ಕೆ ಹೋಗುವ ಸಂಪ್ರದಾಯವಿದೆ, ಶನಿಯ ದೇವಸ್ಥಾನ ಇಲ್ಲದಿದ್ದರೆ ಶಿವ ಅಥವಾ ವಿಷ್ಣು ದೇವಸ್ಥಾನಕ್ಕಾದರೂ ಹೋಗಬಹುದು. ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಶನಿಗೆ ಪ್ರಿಯವಾದದ್ದು ಕಪ್ಪು ಎಳ್ಳು, ಕಪ್ಪುವಸ್ತ್ರ ಇವುಗಳನ್ನು ಸಾತ್ವಿಕರಾದ ಕಡುಬಡವರಿಗೆ ದಾನ ಮಾಡುವುದರಿಂದ ಅನಂತ ಫಲವಿದೆ. ವಿಶೇಷವಾಗಿ ರೋಗಾದಿಶಮನಕ್ಕಾಗಿ ಕಬ್ಬಿಣದ ಪಾತ್ರೆಗಳನ್ನು ಅರ್ಹ ಬಡವರಿಗೆ ದಾನ ಮಾಡಬೇಕು, ‘ಶನೈಶ್ಚರಾಯ ನಮಃ’ ಈ ಮಂತ್ರವನ್ನು ಸಾಧ್ಯವಾದಷ್ಟು ಜಪಿಸಬೇಕು.
ಈ ವರ್ಷದಲ್ಲಿ ಕುಂಭ-ಮೀನ -ಮೇಷ ರಾಶಿಯವರಿಗೆ ದ್ವಿತೀಯ ಶನಿ ಹಾಗೂ ವೃಶ್ಚಿಕರಾಶಿಯವರಿಗೆ ಪಂಚಮ ಶನಿ ಮತ್ತು ಸಿಂಹರಾಶಿಯವರಿಗೆ ಅಷ್ಟಮ ಶನಿ ಇರುವುದರಿಂದ ಈ ರಾಶಿಯವರು ಎಳ್ಳೆಣ್ಣೆ ದೀಪ ಬೆಳಗಿಸಿ, ‘ಸೂರ್ಯ ಪುತ್ರೋ ದೀರ್ಘದೇಹೋ ವಿಶಾಲಾಕ್ಷೋ ಶಿವಃ ಪ್ರಿಯಃ | ಮಂದ ಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ || ಎಂಬ ಮಂತ್ರವನ್ನು ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಜಪಿಸುವುದರಿಂದ ಕಷ್ಟಗಳು ದೂರಾಗುವುದೆಂದು ಶಾಸ್ತ್ರ ಹೇಳುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಆಯುಷ್ಯ ಕಾರಕ. ಜನ್ಮಕಾಲದಲ್ಲಿ ಲಗ್ನದಿಂದ ಕೇಂದ್ರ ಸ್ಥಾನಗಳಲ್ಲಿ ಉಚ್ಚ ಸ್ಥಿತಿಯಲ್ಲಿದ್ದರೆ ಶಶ ಯೋಗ ಉಂಟಾಗುವುದು. ಇದು ಪಂಚಮಹಾ ಪುರುಷ ಯೋಗಗಳಲ್ಲಿ ಶನಿಯಿಂದಾಗುವ ಮಹಾಯೋಗ, ಈ ಸ್ಥಿತಿಯಲ್ಲಿ ಜನಿಸಿದರೆ ಆಯುಷ್ಯ, ಆರೋಗ್ಯ, ಸಂಪತ್ತುಗಳಿಂದ ಕೂಡಿ ಜೀವನದಲ್ಲಿ ಅತ್ಯಂತ ಯಶಸ್ಸನ್ನು ಪಡೆಯುತ್ತಾರೆ. ಶನಿ ಪ್ರೀತಿಗಾಗಿ ನೀಲಮಣಿಯನ್ನು ಧರಿಸುವರು.
ಶನಿಗೆ ಮಕರ ಕುಂಭಗಳು ಕ್ಷೇತ್ರವಾದರೆ ತುಲಾ ರಾಶಿ ಉಚ್ಚ ಕ್ಷೇತ್ರ. ಮೇಷ ನೀಚ ಕ್ಷೇತ್ರ. ಕುಂಭ ಮೂಲತ್ರಿಕೋಣ. ಶನಿಯ ದಿಕ್ಕು ಪಶ್ಚಿಮ. ವಾಯು ತತ್ವ. ಪ್ರಿಯವಾದ ಧಾನ್ಯ ಎಳ್ಳು, ತ್ರಿದೋಷಗಳಲ್ಲಿ ಶನಿ ವಾತ ಕಾರಕ. ಶನಿಗೆ ಪ್ರಿಯ ವಾದ ಲೋಹ ಕಬ್ಬಿಣ. ಶಮೀವೃಕ್ಷದ ಸಮಿಧಗಳನ್ನು ಶನಿಗೆ ಸಂಬಂಧಿಸಿದ ಹೋಮಗಳಲ್ಲಿ ವಿನಿಯೋಗಿಸುತ್ತಾರೆ. ಶನಿ ಜಯಂತಿ ದಿನ ಶನಿದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ ಸಕಲ ಸಂಕಷ್ಟಗಳು ನಿವಾರಣೆ ಆಗುವುದು.