ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಸ್.ರವಿಕುಮಾರ್, ಕೆ.ಅಂಜನಪ್ಪ, ಮಹಾಲಿಂಗಪ್ಪ, ಸಿ.ಎಸ್.ಚಂದ್ರಭೂಪಾಲ್, ಗುರುದತ್ತ ಹೆಗಡೆ, ಎಸ್.ಎಚ್.ಜಗದೀಶ್, ಸುಜತಾ, ಎಚ್.ಉಮೇಶ್ ಇದ್ದರು. 
ನ್ಯೂಸ್

ಶ್ರೀಕೃಷ್ಣ ಲೋಕ ಕಲ್ಯಾಣ ಮಾಡಿದ ರಕ್ಷಕ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಶ್ರೀ ಕೃಷ್ಣ ನಮಗೆ ಮಾತ್ರ ಸೀಮಿತವಲ್ಲ. ಆತ ಸರ್ವವ್ಯಾಪಿ, ಸರ್ವಶ್ರೇಷ್ಠ. ಲೋಕ ಕಲ್ಯಾಣ ಮಾಡಿದ ಲೋಕಮಾನ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘದ ಆಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅಧರ್ಮ ತಲೆ ಎತ್ತಿದಾಗ, ಧರ್ಮ ರಕ್ಷಣೆಗಾಗಿ ಮತ್ತೆ ಅವತರಿಸುವ ಹಾಗೂ ಇಡೀ ಲೋಕಕ್ಕೆ ಮಾನ್ಯನಾದ ಶ್ರೀ ಕೃಷ್ಣನನ್ನು ನಮ್ಮಲ್ಲಿ ಜಾಗೃತಗೊಳಿಸಿಕೊಂಡು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತಿಗೇ ಒಳ್ಳೆಯದು ಮಾಡಿದ ಶ್ರೀ ಕೃಷ್ಣನನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಇಷ್ಟಪಡುತ್ತಾರೆ. ಧರ್ಮ ಸ್ಥಾಪನೆ ಮತ್ತು ಸಮಾಜದ ಸ್ವಾಸ್ಥ್ಯ ಕೃಷ್ಣನ ಗುರಿಯಾಗಿತ್ತು. ಇದು ನಮ್ಮೆಲ್ಲರ ಜೀವನದ ಗುರಿಯಾಗಬೇಕು. ಅಧರ್ಮ ಅವನತಿಯಾಗಿ ಧರ್ಮ ಸ್ಥಾಪನೆ ಆಗಬೇಕು. ರಾಕ್ಷಸತನ ದೂರ ಆಗಬೇಕೆಂದು ಕಾರ್ಯಪ್ರವೃತ್ತರಾದವನು ಕೃಷ್ಣ ಎಂದು ಬಣ್ಣಿಸಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕ ಮಾತನಾಡಿ, ಅಧರ್ಮ ನಾಶಪಡಿಸಿ, ಧರ್ಮ ಸ್ಥಾಪಿಸಿದವರು ಶ್ರೀ ಕೃಷ್ಣ. ಧರ್ಮದ ಪರ ನಿಂತು ಸಮಾಜಕ್ಕೆ ಉತ್ತರ ನೀಡಿದ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ. ಭಗವದ್ಗೀತೆ ಪಠಣ ಮಾಡಿದರೆ ನಮ್ಮ ಗೊಂದಲಗಳಿಗೆ ಉತ್ತರ ಸಿಗುತ್ತದೆ ಎಂದರು.
ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿ, ಕೃಷ್ಣ ಎಂದರೆ ಸ್ನೇಹ, ಸಂತೋಷ ಎಲ್ಲ ಸಮುದಾಯಗಳಲ್ಲೂ ಮೂಡುತ್ತದೆ. ಅಂತಹ ಕೃಷ್ಣನ ನಡೆ-ನುಡಿಯನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳಬೇಕು ಎಂದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ವಿಶ್ವ ಗುರು ಶ್ರೀ ಕೃಷ್ಣ. ಪಾಂಡವರು ಸೇರಿ ಎಲ್ಲರೂ ನಮ್ಮ ಮಾರ್ಗದರ್ಶಕರು. ಸಮಾಜದ ಏಳ್ಗೆಗಾಗಿ ನಾವೆಲ್ಲ ಒಗ್ಗಟ್ಟಾಗಿ ಇರಬೇಕಿದೆ ಎಂದು ಹೇಳಿದರು.
ಜಿಲ್ಲಾ ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಕೆ.ಅಂಜನಪ್ಪ ಮಾತನಾಡಿದರು. ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಹಾಲಿಂಗಪ್ಪ ಉಪನ್ಯಾಸ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಡಿಸಿ ಗುರುದತ್ತ ಹೆಗಡೆ, ತಾಲೂಕು ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್, ಸುಜತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಜರಿದ್ದರು.