ನ್ಯೂಸ್

ಹಾಡಹಗಲಲ್ಲೇ 100 ಕೋಟಿಗೂ ಅಧಿಕ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ ದುಷ್ಕರ್ಮಿಗಳು

ಪ್ಯಾರಿಸ್​: ಸಿನಿಮೀಯ ಶೈಲಿಯಲ್ಲಿ ಹಾಡಹಗಲಲ್ಲೇ ಚಿನ್ನಾಭರಣ ಸೇರಿದಂತೆ 100 ಕೋಟಿಗೂ ಅಧಿಕ ಮೌಲ್ಯದ ವಸ್ತುವನ್ನು ದರೋಡೆ ಮಾಡಿರುವ ಘಟನೆ ಫ್ರಾನ್ಸ್​ನಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲೇ ಈ ದರೋಡೆ ನಡೆದಿರುವುದು ಕಳವಳಕ್ಕೆ ಕಾರಣವಾಗಿದೆ.

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ​ ಬೆಲೆ ಬಾಳುವ ಆಭರಣಗಳು ಮತ್ತು ಐಷಾರಾಮಿ ಕೈಗಡಿಯಾರಗಳನ್ನು ಮಾರಾಟ ಮಾಡುವ ಪಿಯಾಗೆಟ್ ಸ್ಟೋರ್​ಗೆ ಶಸ್ತ್ರಸಜ್ಜಿತವಾಗಿ ನುಗ್ಗಿದ್ದ ದುಷ್ಕರ್ಮಿಗಳು ಸಿಬ್ಬಂದಿಯನ್ನು ಹೆದರಿಸಿ, ಅಂದಾಜು 180 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಮಧ್ಯಾಹ್ನ 1 ಗಂಟೆಯ ಸಮಯದಲ್ಲೇ ನಡೆದಿದೆ.

ಮೂವರು ದುಷ್ಕರ್ಮಿಗಳ ಗ್ಯಾಂಗ್​ ಕೈಯಲ್ಲಿ ಬಂದೂಕು ಹಿಡಿದು ಈ ಕೃತ್ಯವನ್ನು ಎಸಗಿದ್ದಾರೆ. ಸ್ಟೋರ್​ನ ಭದ್ರತಾ ಸಿಬ್ಬಂದಿ ಹಾಗೂ ಒಳಗಿದ್ದ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅಂಗಡಿಯಲ್ಲಿದ್ದ ಚಿನ್ನಾಭರಣ, ಹಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಬ್ಯಾಗ್​ಗಳಲ್ಲಿ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಅಂಗಡಿಯಲ್ಲಿದ್ದ ಗ್ರಾಹಕರಿಗಾಗಲಿ ಅಥವಾ ಸಿಬ್ಬಂದಿಗಾಗಲಿ ಯಾವುದೇ ಹಾನಿಯಾಗಿಲ್ಲ ಎಂದು ಪ್ಯಾರಿಸ್ ಪೊಲೀಸರು ಬಹಿರಂಗಪಡಿಸಿದ್ದಾರೆ.

ಪಿಯಾಗೆಟ್ ಎಂಬ ಈ ಕಂಪನಿ ಸ್ವಿಟ್ಜರ್ಲೆಂಡ್‌ ಮೂಲದ್ದು. ರಿಚೆಮಾಂಟ್ ಗ್ರೂಪ್‌ನ ಅಂಗಸಂಸ್ಥೆಯಾದ ಪಿಯಾಗೆಟ್ ಕಂಪನಿ ಐಷಾರಾಮಿ ಕೈಗಡಿಯಾರಗಳು ಮತ್ತು ದುಬಾರಿ ಆಭರಣಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಪ್ರತಿ ವಾಚ್‌ಗೆ ಕನಿಷ್ಠ ರೂ. 9ರಿಂದ 10 ಲಕ್ಷ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನ ಅತ್ಯಂತ ಜನನಿಬಿಡ ಸ್ಥಳವೆಂದೇ ಹೆಸರುವಾಸಿಯಾಗಿರುವ ರೂ ಡಿ ಲಾ ಪ್ರೀನಲ್ಲಿ ಪಿಯಾಗೆಟ್ ಅಂಗಡಿಯ ದರೋಡೆ ನಡೆದಿದೆ. ಈ ರೂ ಡೆ ಲಾ ಪ್ರಿಯು ಉನ್ನತ ಮಟ್ಟದ ಆಭರಣ ಮಳಿಗೆಗಳು ಮತ್ತು ಉನ್ನತ ಮಟ್ಟದ ಗಡಿಯಾರ ಅಂಗಡಿಗಳಿಂದ ತುಂಬಿದೆ.

ಇನ್ನು ಕಳೆದ ಏಪ್ರಿಲ್​ನಲ್ಲಿಯೂ ಈ ಭಾಗದಲ್ಲಿ ಇಂತಹ ಭಾರೀ ಕಳ್ಳತನ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್​ನಲ್ಲಿ ಬಂದ ಮೂವರು ಬಲ್ಗೇರಿ ಅಂಗಡಿಗೆ ನುಗ್ಗಿ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ದೋಚಿದರು. (ಏಜೆನ್ಸೀಸ್​)