ಫಾರೆವರ್ ಚಿತ್ರಕ್ಕೆ ಆರಂಭ ಫಲಕ ತೋರಿಸಿದ ನಟ ಧ್ರುವ
- ಲೂಸ್ ಮಾದ ಯೋಗೇಶ್ 51ನೇ ಚಿತ್ರಕ್ಕೆ ಮುಹೂರ್ತ
- ಚಿತ್ರಕ್ಕೆ ಫಾರೆವರ್ ಎಂದು ಟೈಟಲ್ ಫಿಕ್ಸ್
- ಫಾರೆವರ್ ಗೆ ಆರಂಭ ಫಲಕ ತೋರಿಸಿದ ನಟ ಧ್ರುವ ಸರ್ಜಾ
ಬೆಂಗಳೂರು: ನಟ ಲೂಸ್ ಮಾದ ಯೋಗೀಶ್ ಕನ್ನಡ ಚಿತ್ರರಂಗದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗೆ ಅವರ ನಟನೆಯ 50ನೇ ಚಿತ್ರ ‘ಕಿಂಗ್’ ಘೋಷಣೆಯಾಗಿತ್ತು. ಅದರ ಬೆನ್ನಲ್ಲೇ ಯೋಗಿಯ 51ನೇ ಚಿತ್ರ ಮುಹೂರ್ತ ಕಂಡಿದೆ. ಸಿನಿಮಾಕ್ಕೆ ‘ಫಾರೆವರ್’ ಎಂದು ಹೆಸರಿಡಲಾಗಿದ್ದು, ಮೊದಲ ದೃಶ್ಯಕ್ಕೆ ನಟ ಧ್ರುವ ಸರ್ಜಾ ಆರಂಭ ಲಕ ತೋರಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಚಂದ್ರಿಕಾ’ ಖ್ಯಾತಿಯ ಎಂ. ಯೋಗೇಶ್ ‘ಫಾರೆವರ್’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹೊಸ ಸಿನಿಮಾಕ್ಕೆ ಮುಹೂರ್ತ ನೆರವೇರಿದ ಖುಷಿಯಲ್ಲಿ ಲೂಸ್ ಮಾದ ಯೋಗಿ, ‘ಎರಡು ವರ್ಷಗಳ ಬಳಿಕ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನೆರವೇರಿದೆ. ನಿರ್ದೇಶಕರು ಒಳ್ಳೆಯ ಕಥೆ ಬರೆದಿದ್ದಾರೆ. ಈವರೆಗೂ ಮಾಡಿರದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಲವ್, ಸೆಂಟಿಮೆಂಟ್, ಆ್ಯಕ್ಷನ್ ಅಂಶಗಳಿರುವ ಚಿತ್ರವಿದು. ನಾನು ಬೈಕ್ ರೈಡಿಂಗ್ ಇಷ್ಟಪಡುತ್ತೇನೆ. ಹಾಗೆಯೇ, ಇಲ್ಲಿ ನಾನು ಬೈಕ್ ರೈಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ’ ಎಂದು ಮಾಹಿತಿ ಹಂಚಿಕೊಂಡರು. ಇಲ್ಲಿ ಯೋಗೀಶ್‌ಗೆ ‘ಕಜ್ಜ’, ‘ಕಟ್ಟೆಮಾರ್’ ಸಿನಿಮಾಗಳ ಖ್ಯಾತಿಯ ತುಳು ನಟಿ ಆಕಾಂಕ್ಷ ರಾವ್ ಜೋಡಿಯಾಗಿದ್ದಾರೆ. ಪ್ರದ್ಯೋತ್ತನ್ ಸಂಗೀತ, ಸಂಕೇತ್ ಛಾಯಾಗ್ರಹಣದಲ್ಲಿ ‘ಫಾರೆವರ್’ ಮೂಡಿಬರಲಿದೆ.