ಕೋಲಾರ/ಕೆಜಿಎಫ್: ಲಾಂಗ್ ಹಿಡಿದು ಪುಂಡಾಟಿಕೆ ನಡೆಸಿ, ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಎಸ್ಟಿ ಬ್ಲಾಕ್ನಲ್ಲಿ 2 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ ಪುಡಿ ರೌಡಿಗಳ ಗುಂಪನ್ನು ಹೆದರಿಸಲು ಯುವಕರ ಪಡೆಯೊಂದು ಲಾಂಗ್ಗಳನ್ನು ಹಿಡಿದು ಬಡಾವಣೆಗಳಲ್ಲಿ ಓಡಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬೆನ್ನಲ್ಲೇ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಡುಹಗಲೇ ಲಾಂಗ್, ಮಚ್ಚು ಹಿಡಿದು ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಆಂಡ್ರಸನ್ಪೇಟೆಯಲ್ಲಿ ವ್ಯಾಪಾರಿಗಳಿಗೆ ಪುಡಿ ರೌಡಿಗಳು ಬೆದರಿಕೆ ಹಾಕುವ ಘಟನೆಗಳು ಆಗಾಗ ಸಂಭವಿಸುತ್ತಿದ್ದು, ಇಂತಹವರನ್ನು ಮಟ್ಟ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.