ಛಲವಾದಿ ನಾರಾಯಣಸ್ವಾಮಿ 
ನ್ಯೂಸ್

ಇನ್ನು ಶೇ.25ರಷ್ಟು ಲೋಕಾಯುಕ್ತ ತನಿಖೆ ಬಾಕಿ: ನಾರಾಯಣಸ್ವಾಮಿ ವಿಶ್ಲೇಷಣೆ

ಬೆಂಗಳೂರು:
ಮೂಡಾ ಹಗರಣ ಸಂಬಂಧ, ನ್ಯಾಯಾಲಯದಲ್ಲಿ ಈಗಾಗಲೇ ಹೆಚ್ಚು ಕಡಿಮೆ ಶೇ.70-75 ಭಾಗದಷ್ಟು ತನಿಖೆಯನ್ನು ಮುಗಿದಿದೆ. ಲೋಕಾಯುಕ್ತಕ್ಕೆ ಕೇವಲ ಶೇ.25ರಷ್ಟು ತನಿಖೆ ಬಾಕಿ ಇದೆ ಅಷ್ಟೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಮುಡಾದಿಂದ 2 ಸೈಟ್ ಪಡೆಯಬೇಕಾದ ಜಾಗದಲ್ಲಿ ಮುಖ್ಯಮಂತ್ರಿಗಳ ಕುಟುಂಬ 14 ಸೈಟ್ ಪಡೆದುದೇಕೆ ಎಂದು ಹೈಕೋರ್ಟ್ ಪ್ರಸ್ತಾಪಿಸಿರುವುದು ಗಂಭೀರವಾದ ಸಂಗತಿ ಎಂದರು.
ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯಮಂತ್ರಿಗಳು ತಡ ಮಾಡದೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಸಿಎಂ ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ. ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.
ಕೋರ್ಟ್ ಆದೇಶ ಬಂದ ಬಳಿಕ ತನಿಖೆಗೆ ಸಿದ್ಧ ಎನ್ನುವುದು ಅಪಾರ್ಥ. ಆದೇಶ ಬಂದ ಬಳಿಕ ಸಿದ್ಧನಿಲ್ಲ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಿನ್ನೆಯ ಆದೇಶಕ್ಕೂ ಇವತ್ತಿನ ಜನಪ್ರತಿನಿಧಿಗಳ ವಿಶೇಷ ಕೋರ್ಟಿನ ಆದೇಶಕ್ಕೂ ಬಹಳ ವ್ಯತ್ಯಾಸವಿದೆ. ಇವತ್ತಿನ ಆದೇಶದಲ್ಲಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 3 ತಿಂಗಳಿನಲ್ಲಿ ವರದಿ ಕೊಡಲು ತಿಳಿಸಿದೆ ಎಂದರು.
1992ರಲ್ಲಿ ಮುಡಾ, ಈ ಜಮೀನನ್ನು ಸ್ವಾಧೀನಪಡಿಸಿಕೊಂಡ ಬಳಿಕ 1996ರಲ್ಲಿ ಅದಕ್ಕೆ ಪರಿಹಾರವನ್ನೂ ಕೊಟ್ಟಿತ್ತು. 1998ರಲ್ಲಿ ಇದರ ಡಿನೋಟಿಫಿಕೇಶನ್ ಆಗಿದೆ. ಆ ಡಿನೋಟಿಫಿಕೇಶನ್‌ನಲ್ಲೇ ತಪ್ಪಿದೆ. ಅಲ್ಲಿಂದೀಚೆಗೆ ನಡೆದ ಎಲ್ಲ ವ್ಯವಹಾರಗಳೂ ತಪ್ಪಾಗಿವೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಜರಿದ್ದರು.