ನ್ಯೂಸ್

ಸೆಬಿ ಮಾಜಿ ಮುಖ್ಯಸ್ಥೆ ಮಾಧವಿಗೆ ಲೋಕಪಾಲ ಕ್ಲೀನ್​ಚಿಟ್

ನವದೆಹಲಿ: ಹಿಂಡೆನ್​ಬರ್ಗ್ ವರದಿಯ ಆಧಾರದ ಮೇಲೆ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧ ಮಾಡಲಾಗಿದ್ದ ಹಿತಾಸಕ್ತಿ ಸಂಘರ್ಷ ಮತ್ತು ಅನುಚಿತ ವ್ಯವಹಾರದ ಆರೋಪ ಗಳು ಆಧಾರರಹಿತ ಎಂದು ಭ್ರಷ್ಟಾಚಾರ ತನಿಖಾ ಸಂಸ್ಥೆ ಲೋಕಪಾಲ್ ಬುಧವಾರ ಸ್ಪಷ್ಟಪಡಿಸಿದೆ.

‘ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಸೇರಿದಂತೆ ಹಲವರು ಸಲ್ಲಿಸಿರುವ ದೂರುಗಳು ಹಿಂಡೆನ್​ಬರ್ಗ್ ವರದಿಯನ್ನೇ ಆಧರಿಸಿವೆ. ಅದಾನಿ ಉದ್ಯಮ ಸಮೂಹವನ್ನು ಮೂಲೆಗುಂಪು ಮಾಡುವ ಉದ್ದೇಶ ಹೊಂದಿದ್ದ ಕಂಪನಿ ಅದು’ ಎಂದು ಲೋಕಪಾಲ್ ತನ್ನ ತೀರ್ಪಿನಲ್ಲಿ ಹೇಳಿದೆ. ‘ಅದಾನಿ ಸಮೂಹದ ಸಾಗರೋತ್ತರ ಹಣ ವರ್ಗಾವಣೆಯಲ್ಲಿ ಮಾಧವಿ, ಅವರ ಪತಿಯ ಪಾಲೂ ಇದೆ’ ಎಂಬುದಾಗಿ ಹಿಂಡೆನ್​ಬರ್ಗ್ 2024ರ ಆಗಸ್ಟ್ 10ರ ವರದಿಯಲ್ಲಿ ಹೇಳಿತ್ತು. ಈ ಆರೋಪವನ್ನು ಅವರಿಬ್ಬರೂ ಮತ್ತು ಅದಾನಿ ಸಮೂಹದ ಅಧಿಕಾರಿಗಳು ನಿರಾಕರಿಸಿದ್ದರು.