ಮಾಯಕೊಂಡ ಹೋಬಳಿಯ ಲೋಕಿಕೆರೆ ಗ್ರಾಮದ ಮಾರಿಕಾಂಬಾ ದೇವಾಲಯ.Maricombe Fair 
ನ್ಯೂಸ್

ನಾಳೆಯಿಂದ ಲೋಕಿಕೆರೆ ಮಾರಿಕಾಂಬಾ ದೇವಿಯ ಜಾತ್ರೆ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಐದು ವರ್ಷಗಳ ಬಳಿಕ ಆಚರಣೆ
  • ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಗ್ರಾಮ
  • ಊರಿನಲ್ಲಿ ಸಡಗರ
ಮಾಯಕೊಂಡ: ಹೋಬಳಿಯ ಲೋಕಿಕೆರೆ ಮತ್ತು ಯಲ್ಲಮ್ಮ ನಗರ ಗ್ರಾಮಗಳಲ್ಲಿ ಐದು ವರ್ಷಗಳ ಬಳಿಕ ಗ್ರಾಮದ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾ.3ರಿಂದ 5ರವರೆಗೆ ವೈಭವದಿಂದ ಜರುಗಲಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮವು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಜಾತ್ರಾ ಮಹೋತ್ಸವಕ್ಕಾಗಿ ಗ್ರಾಮದ ಪ್ರಮುಖ ರಸ್ತೆಗಳು, ದೇವಸ್ಥಾನದ ಆವರಣಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಪರವೂರಿನಿಂದ ಹೆಣ್ಣುಮಕ್ಕಳು ಹಾಗೂ ನೆಂಟರಿಷ್ಟರು ತಂಡೋಪತಂಡವಾಗಿ ಆಗಮಿಸುತ್ತಿರುವುದು ಊರಲ್ಲಿ ಸಡಗರವನ್ನು ಇಮ್ಮಡಿಗೊಳಿಸಿದೆ.
ಲೋಕಿಕೆರೆ ಗ್ರಾಮಕ್ಕೆ ‘ಲೋಕಮ್ಮ ದೇವಿ’ಯ ಹೆಸರಿನಿಂದಲೇ ಈ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಈ ಗ್ರಾಮದಲ್ಲಿ ಈಶ್ವರ, ಆಂಜನೇಯ, ಬೀರಲಿಂಗೇಶ್ವರ, ಕರಿಯಮ್ಮ ಸೇರಿ 20ಕ್ಕೂ ಹೆಚ್ಚು ದೇವರು ನೆಲೆಸಿದ್ದು, ಇವುಗಳಲ್ಲಿ ಮಾರಿಕಾಂಬಾ ದೇವಿಯ ಜಾತ್ರೆಯು ವಿಶಿಷ್ಟವಾದುದು. ಜಾತ್ರೆಯ ಅಂಗವಾಗಿ ಗ್ರಾಮದ ಗಡಿಯೊಳಗೆ ಚಪ್ಪಲಿ ಧರಿಸಿ ಬರದಂತೆ ಪಾರಂಪರಿಕ ದಿಗ್ಬಂಧನ ಹಾಕಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ

  • ಮಾ.3ರಂದು ಬೆಳಗಿನ ಜಾವ 3.30ಕ್ಕೆ ಗಂಗಾಪೂಜೆ, ಮದುವಣಗಿತ್ತಿ ಶಾಸ್ತ್ರ ಹಾಗೂ ಮಹಾಮಂಗಳಾರತಿ, ಬೆಳಗ್ಗೆ 10ಗಂಟೆಗೆ ದೇವಿಯ ಪ್ರತಿಷ್ಠಾಪನೆ ನೆರವೇರಲಿದೆ.
  • ಮಾ.4ಕ್ಕೆ ಬೆಳಗ್ಗೆ 10ಕ್ಕೆ ಹರಿಜನ ಕೇರಿಯಿಂದ ಘಟ್ಟಿಗಡಿಗೆ ತರುವುದು, ಹಿಟ್ಟಿನ ಕೋಣನ ವಧೆ ಹಾಗೂ ಗ್ರಾಮದ ಸುತ್ತ ಚರಗ ಚೆಲ್ಲುವ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 1ಗಂಟೆಗೆ ಗ್ರಾಮದ ವೃತ್ತದ ಪೆಂಡಾಲ್‌ನಲ್ಲಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು.
  • ಮಾ.5ರಂದು ಮಧ್ಯಾಹ್ನ 1ಗಂಟೆಗೆ ಗಾವೋತ್ಸವ ಜರುಗಲಿದೆ.

ಸುಕ್ಷೇತ್ರಕ್ಕೆ ಮಾರ್ಗ

ದಾವಣಗೆರೆಯಿಂದ ಬೆಳವನೂರು-ತುರ್ಚಘಟ್ಟ ಮಾರ್ಗವಾಗಿ ಅಥವಾ ಬೀರೂರು- ಸಮಸ್ಸಗಿ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಬಾಡ ಗ್ರಾಮ ತಲುಪಿ, ಮಳಲ್ಕೆರೆ ಕೋಡಿಹಳ್ಳಿ ಮಾರ್ಗವಾಗಿ 5 ಕಿಮೀ ದೂರ ಸಾಗಿದರೆ ಲೋಕಿಕೆರೆ ತಲುಪುವುದು. ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸೌಲಭ್ಯಗಳಿಬೆ.
"

ಐದು ವರ್ಷಗಳ ನಂತರ ನಡೆಯುತ್ತಿರುವ ಜಾತ್ರೆಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು, ಬೀದಿದೀಪ ಹಾಗೂ ತುರ್ತು ಆಂಬುಲೆನ್ಸ್ ಸೇರಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ಶಿಸ್ತಿನಿಂದ ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕು.