ಕೇಂದ್ರ ಸಚಿವ ಕುಮಾರ ಸ್ವಾಮಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವಹೇಳನಾ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕೋಲಾರದಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಯಿತು.  
ನ್ಯೂಸ್

ಲೋಕಾಯುಕ್ತ ಎಡಿಜಿಪಿ ವಿರುದ್ಧ ಕ್ರಮಕ್ಕೆ ಪಟ್ಟು

ಕೋಲಾರ: ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಜೆಡಿಎಸ್‌ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರಿಗಳಿಗೆ ಅವರದೇ ಆದ ಪ್ರೊಟೋಕಾಲ್ ಇರುತ್ತದೆ. ಆದರೆ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ತಮ್ಮ ಪ್ರೋಟೊಕಾಲ್ ಮೀರಿ ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿ ಪದಬಳಕೆ ಬಳಸಿರುವುದನ್ನು ಖಂಡಿಸುತ್ತೇವೆ. ರಾಜ್ಯ ಸರ್ಕಾರದ ಹಿರಿಯ ಅಽಕಾರಿಗಳು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರ ಬಗ್ಗೆ ಬಳಸಿರುವ ವಾಕ್ಯವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಲ್ಲಿ ಬಹುತೇಕ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಅಽಕಾರ ಯಾರಿಗೂ ಶಾಶ್ವತವಲ್ಲ ಆದರೆ ಕಾಂಗ್ರೆಸ್ ನಾಯಕರು ನೇರವಾಗಿ ಕುಮಾರಸ್ವಾಮಿ ವಿರುದ್ಧ ಮಾತನಾಡದೆ, ಸರ್ಕಾರಿ ಅಧಿಕಾರಿಗಳಿಂದ ಕುಮಾರಸ್ವಾಮಿ ವಿರುದ್ಧ ಮಾತನಾಡಿಸುತ್ತಿರುವ ಅನುಮಾನ ಮೂಡುತ್ತಿದೆ ಎಂದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬನಕನಹಳ್ಳಿ ನಟರಾಜ್ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ತಮ್ಮ ಅಧಿಕಾರ ಅವಧಿಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದು, ಅವರ ಇಲಾಖೆಯ ಅಧಿಕಾರಿಗಳು ಆತನ ವಿರುದ್ಧವೇ ದೂರು ನೀಡಿ, ಕಾನೂನು ಹೋರಾಟ ಮಾಡಿದ್ದಾರೆ. ಅಂತಹ ಭ್ರಷ್ಟ ಅಽಕಾರಿಯ ಪರವಾಗಿ ಕಾಂಗ್ರೆಸ್ ನಾಯಕರು ಮಾತನಾಡಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಕಾಂಗ್ರೆಸ್‌ನವರೇ ಎದುರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ಡಾ.ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಕಡಗಟ್ಟೂರು ದಯಾನಂದ್, ಸುಧಾಕರ್, ಪುಟ್ಟರಾಜು ಇದ್ದರು.