ಬೆಂಗಳೂರು: ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆಯ ಬಗ್ಗೆ ಸಾಲು ಸಾಲು ದೂರುಗಳು ಬಂದಿದ್ದ ಕಾರಣ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ, ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿರುವ ವಿಚಾರ ಮತ್ತು ಅಲ್ಲಿನ ಅವ್ಯವಸ್ಥೆ ಕಂಡು ತಿಳಿದ ಲೋಕಾಯುಕ್ತರು ಕೆಂಡಾಮಂಡಲರಾದರು.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಮತ್ತು ನ್ಯಾ.ಬಿ.ವೀರಪ್ಪ ಅವರ ತಂಡ ಶುಕ್ರವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರಿಂದ ಅಹವಾಲು ಆಲಿಸಿದರು. ಅಲ್ಲದೇ, ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು. ರೋಗಿಗಳಿಂದ ದುಡ್ಡು ಸುಲಿಗೆ ಮಾಡುತ್ತಿರುವ ವಿಚಾರ ತಿಳಿದು ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಹೊರಗಡೆಯಿಂದ ಔಷಧ ತರಲು ರೋಗಿಗಳಿಗೆ ಸೂಚಿಸಿದಂತೆ ವೈದ್ಯರಿಗೆ ತಾಕೀತು ಮಾಡಿದರು.
ರೋಗಿಗಳ ಬಗ್ಗೆ ಮತ್ತು ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಲೋಕಾಯುಕ್ತರ ಮುಂದೆ ರೋಗಿಗಳ ಕುಟುಂಬಸ್ಥರು ಅಳಲು ತೋಡಿಕೊಂಡರು ಸರಿಯಾಗಿ ವೈದ್ಯರು ಇಲ್ಲದಿರುವುದು, ರೋಗಿಗಳಿಗೆ ಚಿಕಿತ್ಸೆ ಸಿಗದಿರುವುದು, ಔಷಧಿಗಳ ಕೊರತೆ ಇರುವುದು ಸೇರಿದಂತೆ ಹಲವು ಲೋಪದೋಷಗಳನ್ನು ಪತ್ತೆ ಹಚ್ಚಲಾಯಿತು.
ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು:
ಆಸ್ಪತ್ರೆಯಲ್ಲಿ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿರುವುದು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಬೇಕಾದ ಜವಾಬ್ದಾರಿ ವೈದ್ಯಕೀಯ ಇಲಾಖೆ, ಸೂಪರಿಂಟೆಂಡೆಂಟ್ ಹಾಗೂ ವೈದ್ಯರುಗಳ ಮೇಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಈ ರೀತಿಯಾದರೆ ಏನು ಮಾಡಬೇಕು? ಪ್ರತಿದಿನ ಮುಂಜಾನೆ, ರಾತ್ರಿ ರೋಗಿಗಳು ಬಂದು ದಾಖಲಾಗುತ್ತಾರೆ. ಡಾಕ್ಟರ್ಸ್, ಮೆಡಿಕಲ್ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸಬೇಕು. ಇವೆಲ್ಲ ಸಮಸ್ಯೆಗಳ ಬಗ್ಗೆ ನಾವು ವರದಿ ದಾಖಲು ಮಾಡಿಕೊಂಡಿದ್ದೇವೆ. ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ರೋಗಿಯೊಬ್ಬರು ತಮ್ಮ ಸಂಬಂಧಿಯನ್ನು ಕರೆದುಕೊಂಡು ಬಂದಾಗ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವೈದ್ಯರ ಸಮ್ಮುಖದಲ್ಲೇ ಆರೋಪಿಸಿದರು. ಮತ್ತೋರ್ವರು ಕಳೆದ ಒಂದು ಗಂಟೆಯಿಂದ ಕಾಯುತ್ತಿದ್ದರೂ ವ್ಹೀಲ್ ಚೇರ್ ಕೊಟ್ಟಿಲ್ಲ, ಕೊನೆಗೆ ಯಾವುದೋ ಮುರಿದಿರುವ ಚೇರ್ ಕೊಟ್ಟರು ಎಂದು ಆರೋಪಿಸಿದರು. ವೈದ್ಯರನ್ನು ಕೇಳಿದಾಗ ೫ ವ್ಹೀಲ್ ಚೇರ್ ಇವೆ. ಬೇರೆ ರೋಗಿಗಳು ಅವುಗಳನ್ನು ಬಳಸುತ್ತಿದ್ದುದರಿಂದ ವಿಳಂಬವಾಗಿದೆ ಉತ್ತರಿಸಿದ್ದಾರೆ ಎಂದರು.