ಮೈಸೂರು: ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಮಹೇಶ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೋಲಿಸರು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದರು.
ದಾಳಿ ಸಂದರ್ಭದಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಕೆಂಪಚೆಲುವಮ್ಮಣಿ ಬಡಾವಣೆಯಲ್ಲಿರುವ ಮನೆ, ಗೋಕುಲಂನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮತ್ತು ನಂಜನಗೂಡಿನಲ್ಲಿರುವ ಕಬಿನಿ ಉಪ ವಿಭಾಗದ ಕಚೇರಿ ಪೊಲೀಸರು ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದರು.
ಲೋಕಾಯುಕ್ತ ಪೊಲೀಸರು ಬೆಳಗ್ಗಿನಿಂದ ಸಂಜೆವರೆಗೂ ತಪಾಸಣಾ ಕಾರ್ಯ ನಡೆಸಿದರು. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ, ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್, ಜಯರತ್ನ, ಲೋಕೇಶ್ ಮತ್ತು ಸಿಬ್ಬಂದಿ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್‌ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.