ನ್ಯೂಸ್

ಕಾಂಗ್ರೆಸ್‌ನ ಹಸಿ ಸುಳ್ಳು ಹೊರಗೆಳೆದ ಲೋಕಾಯುಕ್ತ ತನಿಖಾ ವರದಿ: ಆರ್.ಅಶೋಕ್, ವಿಜಯೇಂದ್ರ ವಾಗ್ದಾಳ

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದ ಅವಧಿಯಲ್ಲಿ 40 ಕಮಿಷನ್ ಆರೋಪ ಆಧಾರರಹಿತ, ಹಸಿ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಿಂ ಬಯಲಾಗಿದ್ದು, ಕಾಂಗ್ರೆಸ್ ಪಕ್ಷ ಕಟ್ಟುಕಥೆ ಕಟ್ಟುವಲ್ಲಿ ನಿಸ್ಸೀಮ ಎಂಬುದು ರುಜುವಾತಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಆರ್.ಅಶೋಕ್, ಬಿ.ವೈ.ವಿಜಯೇಂದ್ರ ಪ್ರತ್ಯೇಕವಾಗಿ ಸಂದೇಶ ಹಂಚಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರವೆಂದು ಬಿಜೆಪಿ ವಿರುದ್ಧ ಅಪಪ್ರಚಾರ, ಸುಳ್ಳು ಹೇಳಿಯೇ ಕಾಂಗ್ರೆಸ್ ಅಧಿಕಾರಕ್ಕೆ ಪಡೆದಿದೆ ಎಂದು ಕುಟುಕಿದ್ದಾರೆ.

ಚುನಾವಣೆಗೆ ಅಪಪ್ರಚಾರ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಚುನಾವಣೆಗೆ ಸೃಷ್ಟಿ ಮಾಡಿದ್ದ ಸುಳ್ಳು, ಅಪಪ್ರಚಾರವೆಂದು ಕಾಂಗ್ರೆಸ್‌ನ ಹಲವು ನಾಯಕರು ಒಪ್ಪಿಕೊಂಡಿದ್ದಾರೆ.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಸುಳ್ಳು, ಅಪಪ್ರಚಾರ, ಕಪೋಲಕಲ್ಪಿತ ಆರೋಪಗಳು, ಈಡೇರಿಸಲಾಗದ ಭರವಸೆಗಳ ಆಧಾರದ ಮೇಲೆ ಕನ್ನಡಿಗರಿಗೆ ವಂಚನೆ ಮಾಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಕನ್ನಡಿಗರು ಗಂಟುಮೂಟೆ ಕಟ್ಟಿ ಶಾಶ್ವತವಾಗಿ ಮನೆಗೆ ಕಳುಹಿಸುವ ದಿನಗಳು ದೂರವಿಲ್ಲ ಎಂದು ಆರ್.ಅಶೋಕ್ ಚಾಟಿ ಬೀಸಿದ್ದಾರೆ.

ಅನೈತಿಕ ಮಾರ್ಗ

ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು ದುರ್ಮಾರ್ಗ, ಅನೀತಿ, ಅಪಪ್ರಚಾರ ಹಾಗೂ ಸಮಾಜ ಒಡೆಯುವ ಕೆಲಸಗಳಿಂದಲೇ ಅಧಿಕಾರ ಕಬಳಿಸಿದ್ದಾರೆ ಎಂಬುದಕ್ಕೆ ಪ್ರಸ್ತುತ ಬಹಿರಂಗವಾಗಿರುವ ಲೋಕಾಯುಕ್ತ ವರದಿ ಸಾಕ್ಷಿ ಹೇಳುತ್ತಿದ್ದಾರೆ ಎಂದು ವಿಜಯೇಂದ್ರ ಕಟಕಿಯಾಡಿದ್ದಾರೆ.

ರಾಜ್ಯದ ಜನತೆಯನ್ನು ವಂಚಿಸಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅಧಿಕಾರದಿಂದ ಕೆಳಗೆ ಇಳಿದು, ಕರ್ನಾಟಕದ ಜನತೆಯ ಕ್ಷಮೆ ಕೋರಲಿ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗಲೇ ಲೋಕಾಯುಕ್ತ ತನಿಖಾ ವರದಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಂಗ್ರೆಸ್ಸಿಗರು ಇನ್ನೇನೂ ಸಮಜಾಯಿಷಿ ನೀಡುವುದಕ್ಕಾಗಲಿ, ವಿತಂಡವಾದ ಮಾಡುವುದಕ್ಕಾಗಲಿ ಅವಕಾಶವೇ ಇಲ್ಲ.

ಅಸಲಿ ಸತ್ಯ ಬಹಿರಂಗ

ಸದ್ಯ ಬಾಕಿ ಬಿಲ್ ಪಾವತಿಯಾಗದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಗುತ್ತಿಗೆದಾರರು ರಾಜ್ಯದಲ್ಲಿ ಇರುವುದು 40 ಪರ್ಸೆಂಟ್ ಅಲ್ಲ 80 ಪರ್ಸೆಂಟ್ ಸರ್ಕಾರವೆಂದು ಅಸಲಿ ಸತ್ಯ ಬಹಿರಂಗಪಡಿಸುತ್ತಿದ್ದಾರೆ.

ಒಂದರ ಮೇಲೊಂದು ಹಗರಣಗಳ ತನಿಖೆಯ ಕಾನೂನಿನ ಉರುಳು ಸಿಎಂ ಮತ್ತು ಕಾಂಗ್ರೆಸ್ ಸರ್ಕಾರವನ್ನು ಸುತ್ತಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಮಾರಾಟವಾಗುತ್ತಿದ್ದಾರೆ ಎಂದು ಸಿಎಂ ಅಧಿಕೃತವಾಗಿ ಹೇಳಿಕೆ ನೀಡಿ ಕರ್ನಾಟಕದ ಗೌರವವನ್ನು ಹರಾಜು ಹಾಕುತ್ತಿದ್ದಾರೆ.

ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಜನರೇ ತಕ್ಕಶಾಸ್ತಿ ಮಾಡಲಿದ್ದಾರೆ. ಆದರೆ ಇದೀಗ ತಮ್ಮ ಕರಾಳತೆಯ ಭ್ರಷ್ಟ ಮುಖವನ್ನು ಮುಚ್ಚಿಕೊಳ್ಳಲು ಹವಣಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಧ್ಯಂತರ ವರದಿಯನ್ನು ತರಾತುರಿಯಲ್ಲಿ ತರಿಸಿಕೊಂಡು ಎಸ್‌ಐಟಿ ರಚಿಸಲು ಹೊರಟಿದ್ದು, ಈ ತನಿಖೆಯಿಂದಲೂ ಮುಖಭಂಗವೇ ಕಟ್ಟಿಟ್ಟಬುತ್ತಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.