ಬೆಂಗಳೂರು: ತನ್ನ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಅಗುವ ವಿಳಂಬ ತಡೆಗಟ್ಟುವ ಮತ್ತು ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ನೀಡಿರುವ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಇಲಾಖಾ ವಿಚಾರಣೆಯನ್ನು ನಡೆಸುವ ಕುರಿತು ಇದ್ದ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ.
ಸರ್ಕಾರಿ ನೌಕರನ ಮೇಲಿನ ಆಪಾದಿತ ದುರ್ನಡೆಗೆ ಸಂಬಂಧಿಸಿದಂತೆ ನಾಗರೀಕ ಸೇವಾ ನಿಯಮ 12ರಡಿ ಶಿಸ್ತುಕ್ರಮ ಪ್ರಾರಂಭಿಸಿ ಮುಕ್ತಾಯಗೊಳಿಸಲು ಒಟ್ಟು 45 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸುವುದರಿಂದ ನೌಕರರಿಗೆ ಸಿಗಬೇಕಾದ ಮುಂಬಡ್ತಿ, ಕಾಲಮಿತಿ ವೇತನ ಬಡ್ತಿ, ವೇತನ ಬಾಕಿ ಮುಂತಾದ ಸೇವಾ ಸೌಲಭ್ಯಗಳಿಂದ ವಂಚಿತರಾಗಿದ್ದು, ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲು 9 ತಿಂಗಳುಗಳ ಕಾಲಮಿತಿ ನಿಗದಿಪಡಿಸಿರುವುದರಿಂದ ಇಲಾಖಾ ವಿಚಾರಣೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ನೌಕರರ ಸಂಘ ಸರ್ಕಾರದ ಗಮನಕ್ಕೆ ತಂದಿತ್ತು.
ಇದೀಗ ಸ್ಪಷ್ಟನೆ ನೀಡಿರುವ ಸರ್ಕಾರ, ಇಲಾಖಾ ವಿಚಾರಣೆಯನ್ನು ಲೋಕಾಯುಕ್ತಕ್ಕೆ ವಹಿಸುವ ಪೂರ್ವದಲ್ಲಿ ನೌಕರನ ವಿರುದ್ಧ ತನಿಖಾ ವರದಿಯಲ್ಲಿರುವ ಆಪಾದನೆಗಳ ಕುರಿತು ಈಗಾಗಲೇ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದ್ದರೆ, ಅದರ ಸಂಬಂಧ ಹೊರಡಿಸಿದ ಅಂತಿಮ ಆದೇಶದ ಪ್ರತಿಯನ್ನು ಲಗತ್ತಿಸಿ ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ.
ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆಯುತ್ತಿದ್ದಲ್ಲಿ ಹಾಗೂ ಸರ್ಕಾರವು ಆ ವಿಚಾರಣೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕೆಂದು ನಿರ್ಧರಿಸಿದಲ್ಲಿ ಇಲಾಖಾ ವಿಚಾರಣೆ ಮುಕ್ತಾಯಗೊಳಿಸಿ ಆದೇಶಿಸಬೇಕಾಗುತ್ತದೆ. ಆ ಬಳಿಕವಷ್ಟೇ ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶಿಸಲಾಗುತ್ತದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದದ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿಗದಿಪಡಿಸಲಾದ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.