ನ್ಯೂಸ್

ಪುರಸಭೆ ಕಚೇರಿಗೆ ಲೋಕಾಯುಕ್ತ ಡಿವೈಎಸ್‌ಪಿ ದಿಢೀರ್ ಭೇಟಿ

ಕೆ.ಆರ್.ನಗರ: ಪಟ್ಟಣದ ಪುರಸಭೆ ಕಚೇರಿಗೆ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಕೆ.ಮಾಲತೇಶ್ ಹಾಗೂ ಇನ್ಸ್‌ಪೆಕ್ಟರ್ ರವಿಕುಮಾರ್ ಗುರುವಾರ ದಿಢೀರ್ ಭೇಟಿ ನೀಡಿ ಮೂರು ಗಂಟೆಗಳ ಕಾಲ ಕಡತ ಪರಿಶೀಲನೆ ನಡೆಸಿದರು.


ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರುಗಳು ಕಾಮಗಾರಿ, ಜನನ ಮತ್ತು ಮರಣ ಪ್ರಮಾಣ ಪತ್ರ, ನಿವೇಶನ ಮತ್ತು ಮನೆ ಖಾತೆ ಸೇರಿದಂತೆ ಇತರ ಎಲ್ಲ ಕಡತಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಕೆ.ಮಾಲತೇಶ್, ಕಚೇರಿಯಲ್ಲಿ 500 ಕಡತಗಳು ವಿಲೇವಾರಿಯಾಗದೆ ಬಾಕಿ ಇದ್ದು, ಅದರ ಜತೆಗೆ ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ಸಿಬ್ಬಂದಿ ಅನಗತ್ಯವಾಗಿ ಅಲೆದಾಡಿಸುತ್ತಾರೆ ಎಂಬ ದೂರುಗಳಿದ್ದು, ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.


ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ವಿಚಾರ ತಿಳಿದು ಆಗಮಿಸಿದ ಕೆಲವು ನಾಗರಿಕರು ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಅದಕ್ಕೆ ಸ್ಪಂದಿಸಿದ ಅವರು, ಕೂಡಲೇ ಸಂಬಂಧಿತರಿಗೆ ಆದೇಶಿಸಿ ಅವರ ಕೆಲಸಗಳನ್ನು ಕೂಡಲೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.


ಪುರಸಭೆ ವ್ಯಾಪ್ತಿಯಲ್ಲಿರುವ 72 ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದರೂ ಹರಾಜು ಮಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ನಮ್ಮ ಕಚೇರಿಗೆ ಹಲವು ದೂರುಗಳು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ದಾಖಲಾತಿಗಳನ್ನು ತರಿಸಿಕೊಂಡು ನಿಯಮಾನುಸಾರ ಹರಾಜು ಮಾಡುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.


ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಕಂದಾಯ ಅಧಿಕಾರಿ ರಮೇಶ್, ಇಂಜಿನಿಯರ್ ಚಂದ್ರಶೇಖರ್ ಇದ್ದರು.