ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಐದು ತಾಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕು ಪಂಚಾಯಿತಿಯಡಿಯಲ್ಲಿ ಬರುವ ೧೮ ಗ್ರಾಮ ಪಂಚಾಯಿತಿ ಕಚೇರಿಗಳ ಲೋಕಾಯುಕ್ತರ ತಂಡ ಗುರುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ತಂಡ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಮಹತ್ವದ ದಾಖಲೆಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದೆ.
ಸಾಲು ಸಾಲು ದೂರುಗಳು:
ಸಾರ್ವಜನಿಕರು ತಮ್ಮ ಆಸ್ತಿಯ ಬಗ್ಗೆ ಖಾತಾ ವರ್ಗಾವಣೆ/ ಖಾತಾ ನೊಂದಣಿ ಬಗ್ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವುಗಳನ್ನು ಸೂಕ್ತ ಸಮಯದಲ್ಲಿ ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿರುವುದು. ಕ್ಷುಲ್ಲಕ್ಕ ಕಾರಣಗಳನ್ನು ನೀಡಿ ಅರ್ಜಿಗಳನ್ನು ತಿರಸ್ಕರಿಸಿರುವುದು ಮತ್ತು ಅರ್ಜಿದಾರರನ್ನು ಹಲವಾರು ಬಾರಿ ಪಂಚಾಯಿತಿ ಕಚೇರಿಗೆ ಅಲೆಯುವಂತೆ ಮಾಡಿರುವುದು. ವಸತಿ ಯೋಜನೆಗಳಡಿಯಲ್ಲಿ ಲಾನುಭವಿಗಳ ಆಯ್ಕೆಯಲ್ಲಿ ಅರ್ಹ ಲಾನುಭವಿಗಳನ್ನು ಬದಿಗಿರಿಸಿ, ಅನರ್ಹ ಅಥವಾ ಈಗಾಗಲೇ ಒಂದು ಬಾರಿ ಯೋಜನೆಯ ಲಾಭ ಪಡೆದಿರುವವರನ್ನು ಪುನಃ ಆಯ್ಕೆ ಮಾಡಿರುವುದು ಅಥವಾ ಗ್ರಾಮದಲ್ಲಿ ಸ್ವಂತ ಮನೆ ಭೂಮಿಯನ್ನು ಹೊಂದಿರುವುಂತಹ ವ್ಯಕ್ತಿಗಳನ್ನು ವಸತಿ ಯೋಜನೆಗೆ ಲಾನುಭವಿಯನ್ನಾಗಿ ಆಯ್ಕೆ ಮಾಡಿರುವುದು ಸೇರಿದಂತೆ ೨೧ ಅಂಶಗಳುಳ್ಳ ಸಾಲು ಸಾಲು ದೂರುಗಳನ್ನು ಸಾರ್ವಜನಿಕರು ಲೋಕಾಯುಕ್ತ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಲೋಕಾಯುಕ್ತ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದೆ.
ಅಧಿಕಾರಿಗಳಿಗೆ ತರಾಟೆ:
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ದಾಸನಪುರ ಅಡಕಮಾರನಹಳ್ಳಿ ಗ್ರಾಮಪಂಚಾಯಿತಿಗಳಿಗೆ, ಉಪ ಲೋಕಾಯುಕ್ತ-೧ ನ್ಯಾ.ಕೆ.ಎನ್.ಣೀಂದ್ರ ಅವರು, ಮಂಡೂರು, ಕಣ್ಣೂರು, ರಾಜನಕುಂಟೆ, ಕಸಘಟ್ಟಪುರ ಗ್ರಾಮಪಂಚಾಯಿತಿಗಳಿಗೆ ಅದೇ ರೀತಿ ಉಪಲೋಕಾಯುಕ್ತ-೨ ನ್ಯಾ.ಬಿ.ವೀರಪ್ಪ ಅವರು ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು ಮತ್ತು ಮಜಿರೆ ಹೊಸಹಳ್ಳಿ, ಬೂದಿಹಾಳ್, ಸೋಂಪುರ ಗ್ರಾಮಪಂಚಾಯಿತಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.