ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಣೀಂದ್ರ ಅಧಿಕಾರಿಗಳ ಸಭೆ ನಡೆಸಿದರು. ಪಬ್ಲಿಕ್ ಪ್ರಸಿಕ್ಯೂಟರ್ ಸುಂದರ್ ರಾಜ್, ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧಾರಿ ಇದ್ದರು. 
ನ್ಯೂಸ್

ಲೋಕಾಯುಕ್ತಕ್ಕೂ ಬೇಕಿದೆ ಸಿಬಿಐ ಮಾದರಿ ತನಿಖಾಧಿಕಾರಿಗಳು

ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತಕ್ಕೂ ಸಿಬಿಐ(ಕೇಂದ್ರ ತನಿಖಾ ದಳ) ಮಾದರಿ ತರಬೇತಿ ಪಡೆದ ತನಿಖಾಧಿಕಾರಿಗಳು ಬೇಕಿದೆ ಎಂದು ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಅಧಿಕಾರಿಗಳ ಜತೆಗೆ ಭಾನುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಸರಿಯಾಗಿ ಬಳಸಲು ಬರುತ್ತಿಲ್ಲ. ಇದರಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಿದ್ದು ಹೋಗುತ್ತಿವೆ ಎಂದರು.

ಅಧಿಕಾರಿಗಳು ಲಂಚ ಪಡೆಯುವಾಗ ದಾಳಿ ಮಾಡುವ ವೇಳೆಯೂ ಹಲವು ನ್ಯೂನತೆಗಳು ಆಗುತ್ತಿವೆ. ಇದಕ್ಕೆ ಪ್ರಸ್ತುತ ಇರುವ ಪೊಲೀಸ್ ತರಬೇತಿ ಸಾಕಾಗಲ್ಲ. ಹಾಗಾಗಿ ಸಿಬಿಐ ತರಹ ತರಬೇತಿ ಆದವರು ಬೇಕಿದ್ದು ಮುಂಬರುವ ದಿನಗಳಲ್ಲಿ ಸ್‌ಟಾವೇರ್ ಇಂಜಿನಿಯರ್ ಮತ್ತು ತಾಂತ್ರಿಕ ಪರಿಣಿತರನ್ನು ಜೋಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಲೋಕಾಯುಕ್ತ ಅಧಿಕಾರಿಗಳಾಗಿ ನಿವೃತ್ತ ಸೈನಿಕ ಅಧಿಕಾರಿಗಳನ್ನು ನೇಮಕ ಮಾಡುವುದು ಒಳ್ಳೆಯದು. ಈಗಾಗಲೇ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದಕ್ಷ ಪೊಲೀಸ್ ಅಧಿಕಾರಿಗಳನ್ನೂ ಲೋಕಾಯುಕ್ತಕ್ಕೆ ನೇಮಕ ಮಾಡಬಹುದು. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು. ಪಬ್ಲಿಕ್ ಪ್ರಸಿಕ್ಯೂಟರ್ ಸುಂದರ್‌ರಾಜ್, ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.