ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರ ನಡುವಿನ ಮೈತ್ರಿ, ಸೀಟು ಹಂಚಿಕೆಯ ಮಾತುಕತೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೊಸ ರಾಜಕೀಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ದಳಕ್ಕೆ ಬಿಟ್ಟು ಕೊಡುವ ಕ್ಷೇತ್ರಗಳ ಪೈಕಿ ಈ ಭಾಗವು ಸೇರಿ, ಬಿಜೆಪಿ ಆಕಾಂಕ್ಷಿಗಳಿಗೆ ನಿರಾಸೆಯಾಗುತ್ತದೆಯೇ?, ಪ್ರತಿಷ್ಠಿತ ಚಿಕ್ಕಬಳ್ಳಾಪುರವನ್ನು ಹಾಗೆಯೇ ಕಮಲ ಉಳಿಸಿಕೊಳ್ಳುತ್ತದೆಯೇ?, ಮೈತ್ರಿಯಿಂದ ಮತಗಳ ವಿಭಜನೆ ತಪ್ಪುವಿಕೆ, ಸಮುದಾಯಗಳ ಒಲವು ವೃದ್ಧಿಯ ಲೆಕ್ಕಾಚಾರ?, ಎರಡೂ ಪಕ್ಷಗಳ ರಾಷ್ಟ್ರೀಯತೆ ಮತ್ತು ಜಾತ್ಯತೀತ ತತ್ವಗಳು ಮತದಾರರ ಮೇಲೆ ಪ್ರಭಾವ ಬೀರುವಿಕೆ ಸೇರಿದಂತೆ ಸಾಧಕ ಬಾಧಕಗಳ ಚರ್ಚೆಯಾಗುತ್ತಿದೆ.
ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ 4 ಸ್ಥಾನಗಳನ್ನು ಜೆಡಿಎಸ್ ಕೇಳುತ್ತಿದೆ. ಇದರಲ್ಲಿ ರಾಮನಗರ, ಹಾಸನ, ಕೋಲಾರ, ಮಂಡ್ಯ ಸಹ ಪ್ರಮುಖವಾಗಿ ಇದೆ. ಇದಕ್ಕೆ ಒಪ್ಪಿದ್ದಲ್ಲಿ ದೋಸ್ತಿ ಮುಂದುವರೆಸಲು ಅಭ್ಯಂತರ ಇಲ್ಲ ಎನ್ನಲಾಗಿದೆ. ಇನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ಹೋಲಿಸಿದ್ದಲ್ಲಿ ಸ್ಥಳೀಯವಾಗಿ ದಳ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದೆ. ತನ್ನದೇ ಆದ ವೋಟ್ ಬ್ಯಾಂಕ್ ಉಳಿಸಿಕೊಂಡಿದೆ. ಇದರ ನಡುವೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಇದ್ದಾರೆ.
ಕಳೆದ ಬಾರಿಯ ಮೈತ್ರಿ ಠುಸ್
ಕಳೆದ 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಇಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕೈ ಅಭ್ಯರ್ಥಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ಕೈಗೊಂಡರೂ ಸೋಲಿನ ಮುಖಭಂಗ ಅನುಭವಿಸಿದ ಎರಡು ಪಕ್ಷಗಳು, ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪರಸ್ಪರ ಟೀಕಿಸಿಕೊಂಡಿದ್ದವು. ಸಹಮತದಿಂದ ಕೆಲಸ ನಿರ್ವಹಿಸದಿರುವುದು ಮತ್ತು ಭಿನ್ನಮತ ಸೋಟದಿಂದ ಒಡಕು ಉಂಟಾಯಿತು ಎಂದು ಕಿಡಿಕಾರಲಾಗಿತ್ತು. ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು ಎಂದು ಸ್ವತಃ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
* ಕ್ಷೇತ್ರಗಳಲ್ಲಿ ರಾಜಕೀಯ ಸ್ಥಿತಿ
ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಮೂರು ಜಿಲ್ಲೆಗಳು ಬರುತ್ತವೆ. ಪ್ರಸ್ತುತ ಕಾಂಗ್ರೆಸ್‌ನಿಂದ ರಾಷ್ಟ್ರೀಯ ಯುವ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಮಾಜಿ ಸಚಿವ ಡಾ ಕೆ.ಸುಧಾಕರ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಲ್ಲಿ ಯಾರ ಹೆಸರು ಹೆಚ್ಚಿಗೆ ಸದ್ದು ಮಾಡುತ್ತಿಲ್ಲ. ಸ್ವಪಕ್ಷೀಯರಲ್ಲೂ ಸ್ಪಷ್ಟತೆ ಇಲ್ಲ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬುದಾಗಿ ಘೋಷಿಸಿದ್ದಾರೆ.
* ಸಮುದಾಯಗಳ ಕ್ರೋಢೀಕರಣ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ನಾಯಕರೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಬಲಿಜ ಮತ್ತು ಮೈತ್ರಿ ಪಕ್ಷದಿಂದ ಒಕ್ಕಲಿಗ ಸಮುದಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಸರತ್ತುಗಳು ನಡೆಯುತ್ತಿವೆ. ಇಲ್ಲಿನ ಚುನಾವಣೆಯಲ್ಲಿ ಅಹಿಂದ ಮತಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
*ಮೈತ್ರಿಯ ಹೊಸ ಸವಾಲುಗಳು
ವರಿಷ್ಠರ ನಡುವೆ ಒಪ್ಪಂದಗಳು ಆಗುತ್ತಿರುವುದರ ನಡುವೆ ಸ್ಥಳೀಯವಾಗಿ ಎರಡೂ ಪಕ್ಷಗಳಿಗೂ ಹೊಸ ಸವಾಲುಗಳು ಎದುರಾಗಲಿವೆ. ಇಲ್ಲಿಯವರೆಗೂ ಈ ಭಾಗದಲ್ಲಿ ಜಂಟಿಯಾಗಿ ಚುನಾವಣೆಯನ್ನು ಎದುರಿಸಿಲ್ಲ. ಬದಲಿಗೆ ಕಳೆದ ವಿಧಾನಸಭಾ ಚುನಾವಣೆಗೆ ಕತ್ತಿ ಮಸೆಯುವ ರೀತಿಯಲ್ಲಿ ಪರಸ್ಪರ ಟೀಕಿಸಿಕೊಳ್ಳಲಾಗಿದೆ. ಅಲ್ಲಲ್ಲಿ ಕಾರ್ಯಕರ್ತರು ದೊಣ್ಣೆಗಳನ್ನು ಹಿಡಿದುಕೊಂಡು ಹೊಡೆದಿದ್ದಾರೆ. ಇದರ ನಡುವೆ ಸ್ಥಳೀಯವಾಗಿ ಒಗ್ಗಟ್ಟು ಸಾಧಿಸಲು ದೊಡ್ಡ ಕಸರತ್ತು ನಡೆಸಬೇಕು. ಇದಕ್ಕೆ ಮೋದಿ ಅಲೆಯೇ ಪ್ರಮುಖವಾಗಿ ಪ್ರಭಾವ ಬೀರುತ್ತದೆ ಎನ್ನಲಾಗುತ್ತಿದೆ.
*ಲೋಕಸಭಾ ಚುನಾವಣೆಯು 2024 ರಲ್ಲಿ ನಡೆಯಲಿದೆ. ಈಗಲೇ ಅಭ್ಯರ್ಥಿ, ಸೀಟು ಹಂಚಿಕೆ, ಸೋಲು ಗೆಲುವಿನ ಬಗ್ಗೆ ಹೇಳಲು ಬರುವುದಿಲ್ಲ. ಮುಂಬರುವ ದಿನಗಳಲ್ಲಿ ಏನೇನು ಬೆಳವಣಿಗೆಗಳಾಗುತ್ತದೆಯೋ? ಎನ್ನುವುದನ್ನು ಕಾದು ನೋಡಬೇಕಾಗಿದೆ.
ಬಿ.ಎನ್.ಬಚ್ಚೇಗೌಡ, ಸಂಸದ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
*ಲೋಕಸಭಾ ಚುನಾವಣೆಗೆ ಪರಸ್ಪರ ಮೈತ್ರಿ ಮಾಡಿಕೊಂಡಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಎರಡು ಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಮೂರು ಪಕ್ಷಗಳ ಪೈಕಿ ಒಂದು ಪಕ್ಷದ ಹೋರಾಟವು ಸದ್ದಿಲ್ಲದಂತಿರುತ್ತದೆ.
ರವಿಕುಮಾರ್, ರಾಜಕೀಯ ವಿಶ್ಲೇಷಕ, ಚಿಕ್ಕಬಳ್ಳಾಪುರ