ನ್ಯೂಸ್

ರಾಜ್ಯದ ಲೋಕಸಭೆ ಫಲಿತಾಂಶ: ಅಮಿತ್ ಷಾಗೆ ತೃಪ್ತಿ ಎಂದ ವಿಜಯೇಂದ್ರ

ಬೆಂಗಳೂರು: ರಾಜ್ಯದ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತೃಪ್ತಿ ವ್ಯಕ್ತಪಡಿಸಿರುವುದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಸ ಇಮ್ಮಡಿಸಿದೆ.

ಈ ಚುನಾವಣೆ ಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ದೆಹಲಿಗೆ ತೆರಳಿರುವ ವಿಜಯೇಂದ್ರ, ಕೇಂದ್ರ ಗೃಹ ಸಚಿವರ ಕಚೇರಿಯಲ್ಲಿ ಷಾರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದ ಲಿತಾಂಶದ ಬಗ್ಗೆ ಅಮಿತ್ ಷಾ ತೃಪ್ತಿ ವ್ಯಕ್ತಪಡಿಸಿ, ರಾಜ್ಯದ ಜನತೆಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸಿದರು ಎಂದು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ವಿಜಯೇಂದ್ರ ಸಂದೇಶ ಹಂಚಿಕೊಂಡಿದ್ದಾರೆ.

ಹೋರಾಟದ ಮಾಹಿತಿ

ರಾಜ್ಯದಲ್ಲಿ ಜನವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಿರುವ ಬಗ್ಗೆ ವಿವರ ನೀಡಲಾಯಿತು. ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅವರಿಂದ ಮಾರ್ಗದರ್ಶನ ಕೋರಲಾಯಿತು ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಮೂರು ವಿಧಾನಸಭೆ, ಒಂದು ವಿಧಾನ ಪರಿಷತ್ ಕ್ಷೇತ್ರ ಉಪ ಚುನಾವಣೆ, ಜೆಡಿಎಸ್ ಜತೆಗೆ ಸೀಟುಗಳ ಹಂಚಿಕೆ ಮತ್ತು ಕ್ಷೇತ್ರ ಹೊಂದಾಣಿಕೆ ಚರ್ಚೆಯೂ ವಿಜಯೇಂದ್ರ ದೆಹಲಿ ಪ್ರವಾಸದ ಉದ್ದೇಶವಾಗಿದ್ದು, ಈ ಕುರಿತು ವಿವರಗಳನ್ನು ಅವರು ಹಂಚಿಕೊಂಡಿಲ್ಲ.

ಸಮಾಧಾನಕರ ಸಾಧನೆ

ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ 25 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಜೆಡಿಎಸ್ ಜತೆಗೂಡಿ 19 ಸ್ಥಾನಗಳಲ್ಲಿ ಜಯಸಾಧಿಸಿದೆ. ಟಿಕೆಟ್ ವಿಚಾರದಲ್ಲಿ ಬಿಜೆಪಿ ಸ್ವಯಂಕೃತ ತಪ್ಪಿನಿಂದ ಮೂರು ಸ್ಥಾನಗಳನ್ನು ಕಳೆಕೊಂಡಿದೆ.

ಆಡಳಿತ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ, ಗ್ಯಾರಂಟಿಗಳ ಪ್ರಭಾವ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರವೂ ಬಿಜೆಪಿ 17, ಮಿತ್ರಪಕ್ಷ ಜೆಡಿಎಸ್ ಎರಡು ಸ್ಥಾನ ಗಳಿಸಿದೆ. ಆದರೆ ಕಳೆದ ಬಾರಿಯ ಲಿತಾಂಶ ಪುನರಾವರ್ತನೆ ಸಾಧ್ಯವಾಗಿಲ್ಲ.

ಈ ನಡುವೆ 19 ಸ್ಥಾನಗಳ ಗಳಿಕೆ ವರಿಷ್ಠರಿಗೆ ಸಮಾಧಾನ ತಂದಿದೆ ಎಂದು ಹೇಳಲಾಗಿತ್ತು. ಇದೀಗ ಅಮಿತ್ ಷಾ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ಸಂದೇಶವನ್ನು ವಿಜಯೇಂದ್ರ ರವಾನಿಸಿ, ಸಂಘಟನೆಯಲ್ಲಿ ಹುರುಪು ತುಂಬುಲು ಪ್ರಯತ್ನಿಸಿದ್ದಾರೆ.